ರಾಷ್ಟ್ರ ಹಬ್ಬದ ಸುತ್ತಲೂ ರಾಷ್ಟ್ರಪ್ರಾಣಿಗಳ ಸಾವಿನ ಕಾರ್ಮೋಡ!|| ಆಮಿರ್ ಅಶ್ಅರೀ ಬನ್ನೂರು ಬರಹ

Aug 15, 2025 - 10:53
ರಾಷ್ಟ್ರ ಹಬ್ಬದ ಸುತ್ತಲೂ ರಾಷ್ಟ್ರಪ್ರಾಣಿಗಳ ಸಾವಿನ ಕಾರ್ಮೋಡ!|| ಆಮಿರ್ ಅಶ್ಅರೀ ಬನ್ನೂರು ಬರಹ

ವಸಾಹತುಶಾಹಿ ವ್ಯವಸ್ಥೆ, ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತ ಭಾರತ ಮತ್ತು ಭಾರತೀಯರಲ್ಲಿ ಮೊಳಗಿದ ಪ್ರತಿಕಾರ ದನಿಯೇ ಸ್ವಾತಂತ್ರ್ಯ ಹೋರಾಟ. 
1857 ಸಿಪಾಯಿ ದಂಗೆಯೊಂದಿಗೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಅಧಿಕೃತ ನಾಂದಿ ಹಾಡಲಾಯಿತು. ಈ ಹೋರಾಟಕ್ಕೆ ಭಾರತದ "ಪ್ರಥಮ ಸ್ವಾತಂತ್ರ್ಯ ಹೋರಾಟ" ಎಂಬ ಪರಿಗಣನೆಯಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಪಾಯಿಗಳು, ರಾಜಾಶ್ರಿತರು ಮತ್ತು ಸಾಮಾನ್ಯ ಜನರು ಒಟ್ಟಾಗಿ ಬಂಡಾಯವೆದ್ದ ಚಾರಿತ್ರಿಕ ಮತ್ತು ಸಂಘಟಿತ ಹೋರಾಟವಾಗಿತ್ತು. ಬ್ರಿಟಿಷರ ಆರ್ಥಿಕ ಶೋಷಣೆ ಮತ್ತು ಧಾರ್ಮಿಕ ಹಸ್ತಕ್ಷೇಪದ ಅತೃಪ್ತಿಯೇ ಸಂಘಟಿತ ಹೋರಾಟಕ್ಕೆ ಬೀಜ ಬಿತ್ತಿದವು ಎಂಬುದು ಇತಿಹಾಸ. ರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ಬಹದ್ದೂರ್ ಷಾ ಜಫರ್ ಹಾಗೂ  ತಾತ್ಯಾ ಟೋಪೆ ಮುಂಚೂಣಿ ನಾಯಕರಾಗಿದ್ದರು. 
''1857ರ ಸಂಗ್ರಾಮವು ಕೇವಲ ಒಂದು ದಂಗೆಯಲ್ಲ, ಬ್ರಿಟಿಷ್ ಸಾಮ್ರಾಜ್ಯದ ಅನ್ಯಾಯದ ವಿರುದ್ಧ ಭಾರತದ ಮೊದಲ ಸಂಘಟಿತ ಘೋಷಣೆ'' ಆಗಿತ್ತೆಂದು ಸ್ವಾತಂತ್ರ್ಯ ಹೋರಾಟಗಾರರು ಅಭಿಪ್ರಾಯಿಸಿದ್ದಾರೆ. ಹೀಗೆ ಭಾರತ ಸುದೀರ್ಘಕಾಲದ ಹೋರಾಟ ಕಂಡಿತು. ಎಲ್ಲರೂ ಎಲ್ಲವನ್ನೂ ಕಳೆದುಕೊಂಡ ಪರಿ, ಕೊನೆಯಲ್ಲಿ ಉಳಿದ ಪ್ರಾಣವನ್ನು. ಹೋರಾಟದ ಹಾದಿ ಹಿಡಿದ ಭಾರತೀಯರು ಹೋರಾಟದಿಂದ ಕಿಂಚಿತ್ತು ಕಾಲ್ಕಿತ್ತವರಲ್ಲ. ಅಗಣಿತ ಸಂಖ್ಯೆಯಲ್ಲಿ ಜೀವಗಳ ಬಲಿದಾನ.‌ ರಣಾಂಗಣಕ್ಕಿಳಿದ ಸೇನಾನಿಗಳಿಗೆ ರಾತ್ರಿ ಹಗಲು ಮತ್ತು ಮಳೆ ಚಳಿ ಬಿಸಿಲು ಹಾಗೂ ಅನ್ನ ಪಾನೀಯಗಳ ಅರಿವಿದ್ದಿರಲಿಲ್ಲ. ಕಣ್ಣೆದುರಿನ ಸಾವಿಗೂ ಅಂಜದೆ ಬ್ರಿಟಿಷರ ನಂಜನ್ನು ಬಗ್ಗು ಬಡಿದರು. ಕತ್ತಿ, ಕೋವಿಯಷ್ಟೇ ಕಾವ್ಯಗಳು ಹೋರಾಟಗಳ ಆಯುಧಗಳಾದವು. ಹೀಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಸುಧೀರ್ಘವಿದೆ. ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಮತ್ತು ಅಸ್ಮಿತೆ ಅವರ ರಕ್ತದೊಂದಿಗೆ ಮಣ್ಣು ಸೇರಿದ ಪರಿಣಾಮ ಭಾರತ ಕೇಳದ ಇತಿಹಾಸವೇ ಹೇರಳವಿದೆ. ಎಲ್ಲವೂ ಭವಿಷ್ಯ ಭಾರತದ ನಿರ್ಮಾಣಕ್ಕಾಗಿ ಅವರು ಸಲ್ಲಿಸಿದ ಪ್ರಾಮಾಣಿಕ ಮತ್ತು ಸಮರ್ಪಣಾತ್ಮಕ ತ್ಯಾಗವನ್ನು ಮನದಲ್ಲಿ ಸ್ಮರಿಸಿ ಧನ್ಯರಾಗೋಣ. 

ವರ್ತಮಾನ ಭಾರತ ನಿರಾಳ. 1947 ಆಗಸ್ಟ್ 15ರಂದು ಬ್ರಿಟಿಷರಿಂದ ಪಡೆದ ಭಾರತೀಯ ಸ್ವಾತಂತ್ರ್ಯವು 2025 ಆಗಸ್ಟ್ 15 ತಲುಪುವಾಗ ಭಾರತದ ಸ್ವಾತಂತ್ರ್ಯಕ್ಕೆ 79ನೇ ಸಂಭ್ರಮ. ಕಳೆದುಕೊಂಡ ಭಾರತ ಎಲ್ಲವನ್ನು ಪಡೆದುಕೊಂಡು ತನ್ನದೇ ಆದ ಆಡಳಿತ, ವರ್ಚಸ್ಸು ಹಾಗೂ ಆದಿಪತ್ಯ ಹೊಂದಿದೆ. ದಕ್ಷಿಣ ಏಷ್ಯಾದ ವಿಶಾಲ ಮತ್ತು ಸಾಂಸ್ಕೃತಿಕ ಹಾಗೂ ಸಮೃದ್ಧ ದೇಶವೆಂದೆನಿಸಿದೆ. ಪ್ರಪಂಚದಲ್ಲಿಯೇ ಏಳನೇ ಅತಿದೊಡ್ಡ ದೇಶ ಮತ್ತು ಜನಸಂಖ್ಯೆಯಲ್ಲೂ ಅತಿದೊಡ್ಡ ಜನಾಂಗೀಯ ರಾಷ್ಟ್ರವೆಂಬ ಕಿರೀಟ ಭಾರತದ ಮೇಲಿದೆ. ಇನ್ನೂ ಜಾತಿ ಧರ್ಮ ಆಧಾರಿತ ರಾಜಕೀಯ, ಧರ್ಮ ಸಂಘರ್ಷ, ಅಸಮಾನತೆ, ಅಸಹಿಷ್ಣುತೆ, ಅಸ್ಪೃಶ್ಯತೆ ತೊಲಗಿ ಹಾಗೂ ಆಡಳಿತ ವ್ಯವಸ್ಥೆಯು ಸಮರ್ಪಕವಾಗಿ ಸಂವಿಧಾನಿಕ ನಡೆ ಹಿಡಿದರೆ ಭಾರತವೇ ವಿಶ್ವಗುರು ಆಗುವ ಕಾಲ ದೂರವೇನಿಲ್ಲ. 

ವಿವಿಧ ಧರ್ಮಗಳು, ಪಂಗಡಗಳು, ಭಾಷೆಗಳು, ಸಂಸ್ಕೃತಿಗಳು ಹೀಗೆ ವಿಭಿನ್ನ ವೈಭವಗಳನ್ನು ಮೈಗೂಡಿಸಿಕೊಂಡ ಭಾರತ "ವಿವಿಧತೆಯಲ್ಲಿ ಏಕತೆ" ಎಂಬ ಸಂಘಟಿತ ಸಂದೇಶವನ್ನು ಜಗತ್ತಿನ ಮುಂದೆ ರವಾನಿಸಿದೆ. ಅದರ ಸಾರ್ವಜನಿಕ ಪ್ರದರ್ಶನವೆಂದು ಸ್ವಾತಂತ್ರ್ಯ ದಿನವನ್ನು ಕಾಣಬಹುದು. ಮಸೀದಿ, ದೇವಸ್ಥಾನ, ಚರ್ಚ್, ಶಾಲೆ, ಸರ್ಕಾರಿ ಹಾಗೂ ಖಾಸಗಿ ಕಚೇರಿ ಹೀಗೆ ಎಲ್ಲೇ‌ ಧ್ವಜಾರೋಹಣ ಮಾಡಿದರು ಹಾರುವ ಪತಾಕೆ, ಹಾಡುವ ಗೀತೆ, ಮೊಳಗುವ ಘೋಷಣೆ ಒಂದೇ ಆಗಿದೆ. ಆದರೆ ಈ ಎಲ್ಲಾ ಏಕತೆ ಮತ್ತು ಸಂಭ್ರಮದ ರಾಷ್ಟ್ರ ಹಬ್ಬದ ಸುತ್ತಲೂ ರಾಷ್ಟ್ರಪ್ರಾಣಿ ಹುಲಿಗಳ ಸಾವಿನ ಕಾರ್ಮೋಡಗಳು ಆವರಿಸಿದೆ. ಭಾರತದೂ 'ಹುಲಿ'ಯನ್ನು ರಾಷ್ಟ್ರ ಪ್ರಾಣಿ ಎಂದು ಕರೆಯುವರು. 1972ರಲ್ಲಿ ವನ್ಯಜೀವಿ ಸಂರಕ್ಷಣಾ ಶಾಸನ (Wildlife Protection Act) ಜಾರಿಗೆ ಬಂದಾಗ ಭಾರತದ ಹುಲಿಯನ್ನು ರಾಷ್ಟ್ರೀಯ ಪ್ರಾಣಿ (National Animal) ಎಂದು 1973ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. 
ವನ್ಯಜೀವಿ ಸಂರಕ್ಷಣಾ ಶಾಸನ ಜಾರಿಗೆ ಬಂದ ವರ್ಷದ ನಂತರ ನಡೆದ ಪ್ರಮುಖ ನಿರ್ಧಾರವಾಗಿತ್ತು. ಇದು ದೇಶದ ಶಕ್ತಿ, ಶ್ರೇಷ್ಠತೆ ಮತ್ತು ಜೀವವೈವಿಧ್ಯದ ಪ್ರತೀಕವಾಗಿದೆ. ಈ ಮಾತ್ರಕ್ಕೆ ಇತರ ಪ್ರಾಣಿಗಳನ್ನು ಕಡೆಗಣಿಸಿಲ್ಲ. ಪ್ರಾಣಿ ಹಿಂಸೆಗೆ ಭಾರತದ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಿದೆ. ದೇಶದಲ್ಲಿ ಪ್ರಾಣಿ ಹಿಂಸೆಯ ಪ್ರಕರಣದಿಂದ ಜೈಲು ಸೇರಿದ ಪ್ರಭಾವಿಗಳ ಪಟ್ಟಿಯೇ  ದೊಡ್ಡದಿದೆ. 

ದೇಶದ ಶಕ್ತಿ, ಶ್ರೇಷ್ಠತೆ ಮತ್ತು ಜೀವವೈವಿಧ್ಯದ ಪ್ರತೀಕವಾಗಿರುವ ಹುಲಿಗಳು ಮೃತಪಡುವುದೆಂದರೆ!?. ರಾಷ್ಟ್ರ ಪ್ರಾಣಿಯ ಅಸಹಜ ಸಾವುಗಳು ದೇಶದ ಸಾವಿಗೆ ಸಾಮ್ಯತೆ. ಅಸಂವಿಧಾನಿಕ ನಡೆ ದೇಶಕ್ಕೆ ಆತಂಕ ತರುವಷ್ಟೇ, ರಾಷ್ಟ್ರಪ್ರಾಣಿಯ ಸಾವುಗಳು ದೇಶದ ಶಕ್ತಿಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಸಂವಿಧಾನ ದೇಶದ ಮೇಲೆ ಎಷ್ಟು ಪರಿಣಾಮಕಾರಿಯಾಗಿದೆ ಅಷ್ಟೇ ಪ್ರಾಶಸ್ತ್ಯ‌, ಮಹತ್ವ ಮತ್ತು ರಕ್ಷಣೆ ಹಾಗೂ ಅಸ್ಮಿತೆ ರಾಷ್ಟ್ರ ಪ್ರಾಣಿಗಳಿಗೆ ಸಿಗಬೇಕಾಗಿದೆ. ಜೊತೆಗೆ ರಾಷ್ಟ್ರ ಪಕ್ಷಿ, ರಾಷ್ಟ್ರಗೀತೆ, ರಾಷ್ಟ್ರ ಬಾವುಟ, ಹೇಗೆ ಎಲ್ಲದಕ್ಕೂ ಸಲ್ಲಬೇಕು. ಭಾರತ ಸರ್ಕಾರ 2023 ರಲ್ಲಿ ನಡೆಸಲಾದ ಹುಲಿ ಲೆಕ್ಕಾಚಾರದ (All India Tiger Estimation) ಪ್ರಕಾರ, ಭಾರತದಲ್ಲಿ 3,167 ಹುಲಿಗಳಿವೆ. 2018ರ ಅಂಕಿ ಅಂಶಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಗಮನಾರ್ಹ ಸಂಗತಿ. 
2018ರಲ್ಲಿ ಒಟ್ಟು 2,967 ಹುಲಿಗಳಿದ್ದವು. ಭಾರತವನ್ನು ಪ್ರಪಂಚದ 75% ಹುಲಿಗಳ ನೆಲೆ ಎಂದು ಅಂದಾಜಿಸಲಾಗಿದೆ ಎಂದು ವರದಿಯಾಗಿದೆ. ಹುಲಿಗಳ ಸಂಖ್ಯೆಯಲ್ಲಿ ಮಧ್ಯ ಪ್ರದೇಶ ಅಗ್ರಸ್ಥಾನ, ಕರ್ನಾಟಕ ನಂತರ ಹಾಗೂ ಉತ್ತರಕಾಂಡ ಮೂರನೇ ಸ್ಥಾನದಲ್ಲಿದೆ. ಬಂಡಿಪುರ, ನಾಗರಹೊಳೆ ಹಾಗೂ ದಾಂಡೇಲಿ ಹುಲಿಗಳು ಇರುವ ಪ್ರಮುಖ ನೆಲೆಗಳಾಗಿವೆ. 500 ರಿಂದ 535 ಹುಲಿಗಳಿವೆ ಎಂದು 2022ರ ಅಂದಾಜು. All India Tiger Estimation 2023ರಲ್ಲಿ ನಡೆಸಿದ ಹುಲಿಗಳ ಲೆಕ್ಕಪರಿಶೋಧನೆಯ ಪ್ರಕಾರ 563 ಹುಲಿಗಳು ಕರ್ನಾಟಕದಲ್ಲಿದೆ. ಕರ್ನಾಟಕವನ್ನು ದಕ್ಷಿಣ ಭಾರತದ ಹುಲಿಗಳ ರಾಜಧಾನಿ ಎಂದು ಕರೆಯುತ್ತಾರೆ.
ವಿಷಾದವೇನೆಂದರೆ ಚಾಮರಾಜನಗರ ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ತಲಾ ಒಂದರಂತೆ ಹೆಣ್ಣು ಮತ್ತು ಗಂಡು ಹುಲಿ ಮರಿಗಳು ಸತ್ತವು. ಸಾವಿಗೆ ಹಸಿವು ಕಾರಣವೆಂದು ಮರಣೋತ್ತರ ಪರೀಕ್ಷೆ ತಿಳಿಸಿತು. ರಾಷ್ಟ್ರ ಪ್ರಾಣಿಯ ರಕ್ಷಣೆಯೇ ಸರ್ಕಾರಗಳಿಂದ ಸಾಧ್ಯವಾಗದಿದ್ದರೆ ಹೇಗೆ?! ವನ್ಯಜೀವಿಗಳ ಸಂರಕ್ಷಣೆಯ ಹೆಸರಿನಲ್ಲಿ ಮೀಸಲಿಡುವ ಕೋಟಿಗಟ್ಟಲೆ ಅನುದಾನಗಳನ್ನು ಯಾವುದಕ್ಕೆ ಬಳಸಲಾಗುತ್ತದೆ. 2023-24ರ ಬಜೆಟಿನಲ್ಲಿ, ಕರ್ನಾಟಕ ಸರ್ಕಾರವು ವನ್ಯಜೀವಿ ಸಂರಕ್ಷಣೆಗಾಗಿ ₹200 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿತ್ತು. ಅನುದಾನಗಳ ದುರ್ಬಳಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂತಹ ಘಟನೆಗಳು ಸಂಭವಿಸುವುದು.‌ ಈ ಹಿಂದೆ ಮಲೈ ಮಹದೇಶ್ವರ ವನ್ಯಧಾಮದಲ್ಲಿ ಒಂದೇ ದಿನ ಐದು ಹುಲಿಗಳು ಮೃತಪಟ್ಟದ್ದು ವರದಿಯಾಗಿತ್ತು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಪ್ಪಿಸ್ತರನ್ನು ಶಿಕ್ಷೆಗೆ ಗುರಿಪಡಿಸಬೇಕು. 
ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ಅವನಿ ಎಂಬ ಹೆಸರಿನ ಹುಲಿಯನ್ನು ಅಕ್ರಮ ಬೇಟೆಗಾರರು ಕೊಂದ ಪ್ರಕರಣ 2018ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.
ರಾಮಾವೂರು ಮಾರ್ಟಳ್ಳಿ ಗಡಿಯಲ್ಲಿ ಚಿರತೆಯೊಂದರ ಹತ್ಯೆಯಾಗಿದ್ದು, ಕಾಲನ್ನು ಕತ್ತರಿಸಿದ ಸ್ಥಿತಿಯಲ್ಲಿತ್ತು. 
ರಾಷ್ಟ್ರ ಪ್ರಾಣಿ ಹುಲಿಗಳ ಬದುಕಿನ ಸಾಧಕ ಬಾಧಕಗಳ ಬಗ್ಗೆ ತಿಳಿಯಬೇಕಾದದ್ದು ದೇಶದ ಪ್ರಜೆಗಳ ಆದ್ಯತೆ ಮತ್ತು ಬಾಧ್ಯತೆಯಾಗಿದೆ. ಅವುಗಳ ಅಂಕಿ ಅಂಶಗಳನ್ನು ಸರ್ಕಾರಗಳು ಜನರ ಮುಂದಿಡಬೇಕು. ಹುಲಿಗಳ ಅಸಹಜ ಸಾವಿಗೆ ಹೊಣೆಯಾದವರನ್ನು, ನಿರ್ಲಕ್ಷಣೆ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಶಿಕ್ಷೆಗೆ ವಿಧಿಪಡಿಸಬೇಕು. ಜೊತೆಗೆ ಹುಲಿ ಅಥವಾ ಇನ್ನಿತರ ವನ್ಯಜೀವಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕಾಪಾಡಿಕೊಳ್ಳಬೇಕು ಸರ್ಕಾರದ ಜವಾಬ್ದಾರಿಯಾಗುತ್ತದೆ. ಕಾಡುಗಳಲ್ಲಿ ಇರಬೇಕಾದ ಪ್ರಾಣಿಗಳು ನಾಡುಗಳನ್ನು ಪ್ರವೇಶಿಸಿದರೆ ಮತ್ತೆ ಉಂಟಾಗುವ ಅಪಾಯಕಾರಿ ಸನ್ನಿವೇಶಗಳ ಬಗ್ಗೆ ಸರಕಾರಕ್ಕೆ ತಿಳಿಸಬೇಕಾಗಿಲ್ಲ. ಯಥೇಚ್ಛವಾಗಿ ಅವುಗಳಿಗೆ ಬೇಕಾದ ಮೂಲಭೂತ ಸೌಕರ್ಯ ಮತ್ತು ಇತರ ಎಲ್ಲಾ ವ್ಯವಸ್ಥೆಗಳನ್ನು ಕಾಡುಗಳಲ್ಲೇ ಸರ್ಕಾರಗಳು ಒದಗಿಸುವುದೇ ಆದರೆ ಅವು ನಮ್ಮೆಡೆ ಮುಖ ಮಾಡಲಾರದು. ಇನ್ನಾದರೂ ಸರ್ಕಾರಗಳು ಸೂಕ್ಷ್ಮವಾಗಿ ಎಚ್ಚೆತ್ತುಕೊಳ್ಳಲಿ. ದೇಶವು ಪ್ರಗತಿ ಕಾಣುವುದರ ಜೊತೆ ಜೊತೆಗೆ ದೇಶದ ಇನ್ನಿತರ ಅಸ್ಮಿತೆಗಳು ಆರೋಗ್ಯಕರ ಬದುಕನ್ನು ಸಿದ್ಧಿಸಿಕೊಳ್ಳುವಂತಾಗಲಿ. 

ದೇಶದಲ್ಲಿ ಹುಲಿಯನ್ನು ಕೊಲ್ಲುವುದು ಗಂಭೀರ ಅಪರಾಧ ಹಾಗೂ ಕಠಿಣ ಶಿಕ್ಷೆಯಿದೆ. ಕನಿಷ್ಠ 3 ವರ್ಷಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ, ₹10 ಲಕ್ಷದಿಂದ ₹50 ಲಕ್ಷದವರೆಗೆ ದಂಡ ಹಾಗೂ ಅಪರಾಧವನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುತ್ತದೆ. ಇದೇ ಶಿಕ್ಷೆಯನ್ನು ಹುಲಿಯ ಚರ್ಮ, ಎಲುಬು ಅಥವಾ ಇತರ ಅಂಗಾಂಗಗಳನ್ನು ಶೇಖರಿಸಿದರೆ ಅಥವಾ ಮಾರಾಟ ಮಾಡಿದರೆ ವಿಧಿಸಲಾಗುತ್ತದೆ. ಪ್ರತಿ ವರ್ಷ ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) 2022 ರಲ್ಲಿ 127 ಹುಲಿಗಳು ಮೃತಪಟ್ಟ ಬಗ್ಗೆ ದಾಖಲೆ ನೀಡಿದರೆ, 2023 ರಲ್ಲಿ 168ಕ್ಕೆ ಏರಿಕೆಯಾಗಿತ್ತು. ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ಇನ್ನಿತರ ಅಕ್ರಮ, ಬೇಟೆಯಿಂದ ಸಂಭವಿಸಿದ ಸಾವುಗಳನ್ನು ಒಪ್ಪಿಕೊಳ್ಳಲಾಗದು.

•ಆಮಿರ್ ಅಶ್ಅರೀ ಬನ್ನೂರು 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0