ಅಂಕಗಳ ಹಿಂದಿನ ಓಟದಲ್ಲಿ ಒಡೆದು ಬಿದ್ದ ಕನಸುಗಳು
✍? ಮಹಮ್ಮದ್ ರಾಝಿಕ್ ಮಾಲಾಡಿ
ಅದೊಂದು ಮೇ ತಿಂಗಳ ಶಾಂತ ಮದ್ಯಾಹ್ನ, ಕನಸುಗಳ ಆಗರವನ್ನೇ ಇಟ್ಟುಕೊಂಡಿದ್ದ 16 ವರ್ಷದ ಚುರುಕಿನ ಲವಲವಿಕೆಯಿಂದಿದ್ದ ಬುದ್ಧಿವಂತ ಹುಡುಗಿ, ಇನ್ನೇನು SSLC ಪರೀಕ್ಷಾ ಫಲಿತಾಂಶ ಹೊರಬಿದ್ದು ತಾಸುಗಳಷ್ಟೇ ಕಳೆದಿತ್ತು, ನೇಣಿಗೆ ಶರಣಾಗಿ ತನ್ನ ಜೀವವನ್ನೇ ಕಳೆದುಕೊಂಡಳು. ತನಿಖೆ ನಡೆಸಿದ ಪೊಲೀಸರಿಗೆ ಆಕೆಯ ಸ್ನೇಹಿತರಿಂದ ತಿಳಿದ ಮಾಹಿತಿಯಂತೂ ಪ್ರತಿಯೊಂದು ಹೆತ್ತವರಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ.
ಹೌದು, ಅವಳು ಪ್ರತಿಭಾವಂತೆ, ಬುದ್ಧಿವಂತೆ, ತನ್ನ ಓದಿನ ಪ್ರತಿ ಬಹಳಷ್ಟು ನಿಷ್ಠೆಯಿಂದ ಕಾಳಜಿ ವಹಿಸುತ್ತಿದ್ದವಳು, ಪರೀಕ್ಷೆಯಲ್ಲಿ ತನ್ನ ಶಕ್ತಿ ಮೀರಿದ ಪರಿಶ್ರಮದ ಫಲ ಎಂಬ ನಿಟ್ಟಿನಲ್ಲಿ 90 ಕ್ಕೂ ಅಧಿಕ ಶೇಕಡಾವಾರು ಅಂಕಗಳನ್ನು ಪಡೆದುಕೊಂಡು ತೇರ್ಗಡೆ ಹೊಂದಿದ್ದಳು, ಆದರೆ ಫಲಿತಾಂಶ ನೋಡಿ ಸಂತೋಷ ಪಡಬೇಕಿದ್ದ ಅವಳಿಗೆ ಆತಂಕದ ಅಘಾತವೇ ಆಗಿತ್ತು, ಅವಳಿಗೆ ಇದ್ದ ಚಿಂತೆ ತನ್ನ ಅಂಕ ಕಡಿಮೆ ಆಯಿತಲ್ಲ ಅನ್ನುವುದಕ್ಕಿಂತ ತನ್ನ ಹೆತ್ತವರ ನೀರಿಕ್ಷೆಯನ್ನು ತಾನು ಹುಸಿ ಮಾಡಿದೆನಲ್ಲ ಅನ್ನೋ ಬೇಜಾರು ಜೊತೆಗೆ ಮನೆಯವರ ಪ್ರಶ್ನೆಗೆ ಉತ್ತರಿಸುದಾದರೂ ಹೇಗೆ? ಅನ್ನುವ ದಿಗಿಲು ಅವಳ ಮನಸ್ಸನ್ನು ತಿನ್ನತೊಡಗಿತ್ತು.
ಮನದೊಳಗಿನ ಈ ದುಗುಡ ದುಮ್ಮಾನಗಳನ್ನು ಫಲಿತಾಂಶ ಹೊರಬೀಳುವ ಕೆಲವು ದಿನಗಳ ಹಿಂದೆಯಷ್ಟೇ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಳು. ಅವಳು ಅಂದುಕೊಂಡಂತೆಯೆ ಮನೆಯವರ ನೀರಿಕ್ಷೆ ಬೆಟ್ಟದಷ್ಟಿತ್ತು. ಫಲಿತಾಂಶ ನೋಡಿದ ಮನೆಮಂದಿ ಅವಳ ಅತ್ಯುತ್ತಮ ಅಂಕಗಳನ್ನು ನೋಡಿ ಶ್ಲಾಘಿಸುವ ಬದಲು "ಇಂಗ್ಲಿಷ್ ನಲ್ಲಿ ಪೂರ್ಣ ಅಂಕ ಬರಬೇಕಿತ್ತಲ್ವಾ?" ಅಪ್ಪನ ಮೊದಲ ಮಾತು, "ನಿನ್ನಿಂದ ಪೂರ್ಣ ಅಂಕ ಸಾಧ್ಯವಿತ್ತು, ಆದರೆ ನಿನ್ನ ಒಂದು ಅಂಕದ ಕಡಿತ ನಮ್ಮನ್ನು ಇತರರ ಮುಂದೆ ತಲೆತಗ್ಗಿಸುವಂತೆ ಮಾಡಿದೆ, ಶರ್ಮಾಜೀಯ ಮಗನ ಮಾರ್ಕ್ ನೋಡಿದ್ಯಾ 3 ಸಬ್ಜೆಕ್ಟ್ ನಲ್ಲಿ ಪೂರ್ಣ ಅಂಕ ಗಳಿಸಿಕೊಂಡಿದ್ದಾನೆ. ನೀನು ನಮ್ಮ ಭರವಸೆಗಳನ್ನು ಹಾಗೆಯೇ ಗಾಳಿಯಲ್ಲಿ ತೇಲಿಬಿಟ್ಟೆ" ಎನ್ನುತ್ತಾ ಅಡುಗೆ ಮನೆಯಲ್ಲಿದ್ದ ಅಮ್ಮ ಮೌನ ಮುರಿದರು. ಅಂದು ನಗುವಿನಿಂದ ಅರಳಬೇಕಾಗಿದ್ದ ಅವಳ ಮುಖ ಮೌನಿಯಾಗಿ ಮನದ ಅಲಳನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಮುದುಡಿಹೋಗಿತ್ತು. ಆದರೆ ಮನಸ್ಸು ಮಾತ್ರ ಕೂಗತೊಡಗಿತ್ತು..... ಶಬ್ದವಿಲ್ಲದ ಕೂಗು.
ಪರೀಕ್ಷೆಯಲ್ಲಿ ಸಾಧನೆ ಮಾಡಿ ಮನೆಗೆ ಹರ್ಷವನ್ನು ತರುವ ಕನಸು ಕಟ್ಟಿ ಕೊಂಡಿದ್ದ ಆಕೆ ನೀರಿಕ್ಷೆಗೆ ಅನಿಯಾಗದ ಕಾರಣಕ್ಕೆ ತನಗೆ ಆಶ್ರಯದಾಯಕವಾಗಿದ್ದ ಮನೆಯನ್ನೇ ಒತ್ತಡದ ಕೇಂದ್ರವಾಗಿ ಕಂಡಳು. ಆ ಮುಗ್ದ ಮನಸ್ಸಿನ ಅಂತರಾಳದಲ್ಲಿ ನಡೆದಿದ್ದ ಹೋರಾಟ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ, "ಒಂದು ವೇಳೆ ನೀರಿಕ್ಷಿತ ಅಂಕ ಬರದೇ ಇದ್ದಲ್ಲಿ ಅಮ್ಮನ ಮುಂದೆ ತಲೆ ಎತ್ತಲು ನನಗೆ ಶಕ್ತಿಯಿಲ್ಲ" ಸ್ನೇಹಿತೆಯೊಂದಿಗೆ ಹಂಚಿಕೊಂಡಿದ್ದ ಆಕೆಯ ಮಾತು ಊಹಿಸಿಕೊಳ್ಳುವಾಗ ಮನಸ್ಸು ಭಾರವಾಗುತ್ತದೆ.
ಆ ದಿನ ಸಂಜೆ ಎಂದಿನಂತೆ ಕೊನೆಯೊಳಗೆ ಆಕೆ ತನಗೆ ಇಚ್ಛೆ ಬಂದಂತೆ ಹಾಡು ಹಾಡುವುದೋ ನೃತ್ಯ ಮಾಡುವುದೋ ಮಾಡುತ್ತಿಲ್ಲ ಬದಲಾಗಿ ಕಿಟಕಿಯ ಹೊರಗೆ ನೋಡುತ್ತಾ ಮನಸ್ಸಿನೊಳಗೆ ಸಮರ ಸಾರಿದ್ದಳು, ತನ್ನ ಮೊಬೈಲ್ ನತ್ತ ಕಣ್ಣು ಹಾಯಿಸಿ ಬಳಿಕ ಕೈಗೆತ್ತಿಕೊಂಡು ವಾಟ್ಸಪ್ಪ್ ನಲ್ಲಿ ತನ್ನ ಗೆಳತಿಯ ಖಾತೆ ತೆರೆದಳು "ಅವರಲ್ಲಿ ಏನು ಹೇಳಬೇಕೆಂದು ನನಗೆ ಇನ್ನು ತೋಚುತ್ತಿಲ್ಲ... ನಾನು ನನ್ನ ಸಂಪೂರ್ಣ ಪ್ರಯತ್ನ ಪಟ್ಟಿದ್ದೆ, ನನಗೆ ನನ್ನ ಮೇಲೆ ಭರವಸೆಯೂ ಇತ್ತು ಆದರೆ ವಿಫಲನಾದೆ. ನಾನು ಕಷ್ಟಪಟ್ಟಿದ್ದು ಅವರು ಅರ್ಥಮಾಡಿಕೊಳ್ಳದೆ ಹೋದರು, ನನ್ನವರಿಂದ ಪಡೆದ ಪ್ರತಿಕ್ರಿಯೆಯೂ ನನ್ನನ್ನು ಕುಸಿದು ಹೋಗುವಂತೆ ಮಾಡಿದೆ ನನ್ನ ಹೃದಯ ಒಡೆದು ಹೋಗಿದೆ. ನಾನು ಅವರನ್ನು ನಿರಾಶೆಗೊಳಿಸಲು ಬಯಸಿದ್ದಿಲ್ಲ, ಆದರೆ ನಾನು ಅವರನ್ನು ಈಗಾಗಲೇ ನಿರಾಶೆ ಮಾಡಿದ್ದೇನೆ, ಅಲ್ಲವೇ?" ಎಂದು ಸ್ನೇಹಿತೆಗೆ ಕಳುಹಿಸಲೆಂದು ಟೈಪಿಂಗ್ ಮಾಡಿದ್ದ ಮೆಸೇಜ್ ಅಳಿಸಿ ಬಿಟ್ಟಳು. ಮುಸ್ಸಂಜೆಯ ಕತ್ತಲು ಆವರಿಸುತ್ತಿದ್ದಂತೆ ಚಿಂತೆಯೆಂಬ ಅಗ್ನಿಗೆ ಆಹುತಿಯಾಗಿ ಚಿತೆಯಾಗಿ ಪಂಚಭೂತಗಳಲ್ಲಿ ವಿಲೀನಲಾದಲು. ಒಂದು ವೇಳೆ ಆ ಮೆಸೇಜ್ ಕಳುಹಿಸಿದ್ದಿದ್ದರೆ ಇಂದು ಆ ಜೀವ ಜೀವಂತವಾಗಿರುತ್ತಿತ್ತೋ ಏನೋ?
ಇದು ಕೇವಲ ಒಬ್ಬಳ ಕಥೆಯಲ್ಲ, ಇದು ಸಾವಿರಾರು ಮಕ್ಕಳ ಮೌನ ಕೂಗಿನ ಪ್ರತಿಧ್ವನಿ. ಇದರ ವಿರುದ್ಧ ನಾನು, ನೀವು, ನಾವೆಲ್ಲರೂ ಜೊತೆಯಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಂಕಗಳ ಆಟದಲ್ಲಿ ಬದುಕು ಸೋಲುತ್ತಿರುವ ಪುಟ್ಟ ಮನಸ್ಸುಗಳ ರೋದನೆಗೆ ಕಡಿವಾಣ ಹಾಕುವ ಸಮಯ ಮೀರಿಹೋಗುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ.
ಪರೀಕ್ಷೆಯ ಫಲಿತಾಂಶ ಎಂಬುದು ವಿದ್ಯಾರ್ಥಿಯ ಶ್ರದ್ದೆ, ಪರಿಶ್ರಮ ಮತ್ತು ಶಕ್ತಿಯ ಪ್ರತೀಕವಾಗಿದೆಯೇ ಹೊರತು ಅದು ಬದುಕು ರೂಪಿಸುವ ಏಕಮಾತ್ರ ಸೂತ್ರವಲ್ಲ ಎಂಬುದನ್ನು ಸಮಾಜದ ಪ್ರಜ್ಞಾವಂತ ಸಜ್ಜನರು ತಿಳಿದುಕೊಳ್ಳಬೇಕಿದೆ. ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ ವಿದ್ಯಾರ್ಥಿಗಳಿಗೂ ಅವರು ಪಡೆದ ಅಂಕದ ತೂಕ ಅರ್ಥವಾಗಿರುತ್ತೆ ಕೆಲವರು ಸಂತೋಷದಲ್ಲಿ ಹಿಗ್ಗಿದರೆ ಕೆಲವರು ಕುಗ್ಗಿರುತ್ತಾರೆ ಹೀಗಿರುವಾಗ ಹೆತ್ತವರು ಪೋಷಕರು ಸಂಭಂಧಿಕರು ಸ್ನೇಹಿತರು ಎಂಬ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಪ್ರಯತ್ನ ಮಾಡಬೇಕು ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಅದು ಬಿಟ್ಟು ಹೀಯಾಳಿಸುವ ಮಾತುಗಳನ್ನು ಆಡಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸಕ್ಕೆ ಅಣಿಯಾಗಬಾರದು.
ಪಬ್ಲಿಕ್ ಪರೀಕ್ಷೆಗಳು ಅತ್ಯಂತ ಮಹತ್ವವುಳ್ಳದ್ದು ಎಂಬುದು ಸತ್ಯ ಆದರೆ ಆ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ, ಶೈಕ್ಷಣಿಕ ವರ್ಷದ ಆರಂಭದಿಂದಲೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಬಿಡದೆ ವಿದ್ಯಾರ್ಥಿಗಳನ್ನು ಯಂತ್ರವಾಗಿಸುವ ನೀತಿ ಅಕ್ಷಮ್ಯವಾಗಿದೆ ಬದಲಾಗಿ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಹೆತ್ತವರು ಮಕ್ಕಳ ಮೇಲೆ ನೀರಿಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ ಹಾಗಂದ ಮಾತ್ರಕ್ಕೆ ನೀರಿಕ್ಷೆಗೆ ಹುಸಿಯಾದರೆ ಮಕ್ಕಳನ್ನು ಗದರಿಸುವುದು, ಪಕ್ಕದ ಮನೆಯ ಅಥವಾ ಸಂಭಂಧಿಕರ ಮಕ್ಕಳ ಜೊತೆ ತಮ್ಮ ಮಕ್ಕಳನ್ನು ಹೋಲಿಸುವುದು ಸಲ್ಲದು ಕಾರಣ ಸೃಷ್ಟಿಕರ್ತನ ಪ್ರತಿಯೊಂದು ಸೃಷ್ಟಿಯು ವಿಶೇಷ ಮತ್ತು ವಿಶಿಷ್ಟ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತಾನೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮೊದಲಾದವುಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ. ಓದಿನಲ್ಲಿ ಸ್ವಲ್ಪ ಹಿಂದೆ ಇದ್ದರೂ ಸೃಜನಾತ್ಮಕ ಕೌಶಲ್ಯಗಳಲ್ಲಿ ನಿಮ್ಮ ಮಕ್ಕಳು ಮುಂದಿರಬಹುದು ಆದರೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಪೋಷಕರು ಮಾಡಬೇಕಿದೆ. ತಮ್ಮ ಮಕ್ಕಳ ಮೇಲೆ ಪ್ರೀತಿ ತೋರುವುದರಲ್ಲಿ ತಂದೆ ತಾಯಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ವಾಸ್ತವ ಅದೇ ರೀತಿ ಜಗತ್ತಿನ ಯಾವುದೇ ವ್ಯಕ್ತಿಯು ತನ್ನ ಮೇಲೆ ವಿಶ್ವಾಸ ಇಡದಿದ್ದರು ಪರವಾಗಿಲ್ಲ ಆದರೆ ತಂದೆ ತಾಯಿ ಇಟ್ಟ ಭರವಸೆಯೂ ಯಾವತ್ತಿದ್ದರು ಅದೊಂದು ಬದುಕಿನ ಕಠಿಣ ಸವಾಲುಗಳನ್ನು ಎದುರಿಸಲಿಕ್ಕಿರುವ ಶಕ್ತಿಯೇ ಸರಿ ಹೀಗಿರುವಾಗ ಹೆತ್ತವರಾದವರು ತಮ್ಮ ಮಕ್ಕಳ ಮೇಲೆ ಭರವಸೆ ಇಡುವಂತಾಗಬೇಕು. ಹೆತ್ತವರೇ ಹೀಯಾಳಿಸುವ ತುಲನೆ ಮಾಡುವ ಕಡೆಗಣಿಸುವ ರೀತಿಯಲ್ಲಿ ಮಾತನಾಡತೊಡಗಿದರೆ "ನನಗೇನು ಮಾಡಲು ಸಾಧ್ಯವಿಲ್ಲ" ಎಂಬ ವಿಚಾರ ಹದಿಹರೆಯದ ಮಕ್ಕಳಲ್ಲಿ ಮನೆಮಾಡತೊಡಗುತ್ತದೆ.
ಹೌದು, ಮಕ್ಕಳ ಮನಸ್ಸು ಮೃದುವಾಗಿದೆ, ಅವರ ಕಲ್ಪನೆಗಳೇ ಅವರ ಪ್ರಪಂಚವಾಗಿರುತ್ತದೆ. ಅವರು ಪ್ರತಿಯೊಂದು ಮಾತನ್ನೂ ತಮ್ಮ ಹೃದಯದ ಆಳದಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ಮಕ್ಕಳ ಆಂತರಿಕ ಭಾವನೆಗಳನ್ನು ಅರಿಯದೇ ಅವರ ಮೇಲಿನ ಕೇವಲ ಅಂಕಗಳ ಆಧಾರಿತ ನಿರೀಕ್ಷೆಗಳು ಅವರ ಆತ್ಮಸ್ಥೈರ್ಯವನ್ನು ಹಿಂಜರಿಸಲು ಕಾರಣವಾಗಬಾರದು. ನಾವು ಒಪ್ಪಿಕೊಳ್ಳಬೇಕಾದ ಸತ್ಯ ಏನೆಂದರೆ ಪ್ರತಿಯೊಂದು ವಿದ್ಯಾರ್ಥಿಯ ಯಶಸ್ಸು ಅಂಕಗಳಲ್ಲಷ್ಟೇ ಅಳೆಯಲಾಗದು. ವ್ಯಕ್ತಿತ್ವ, ಮಾನವೀಯ ಮೌಲ್ಯಗಳು, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಪ್ರತಿಭೆಗಳಲ್ಲೂ ಅವರು ಸಾಧನೆಯ ಹಾದಿಯಲ್ಲಿರುವರು ಎಂಬುದನ್ನು ಗುರುತಿಸಬೇಕು.
ಮಕ್ಕಳ ಪರೀಕ್ಷಾ ಫಲಿತಾಂಶದ ನಂತರ ಮನೆಗಳಲ್ಲಿ ತೀವ್ರ ನಿರೀಕ್ಷೆಗಳ ಪರಿಣಾಮವಾಗಿ ಹುಟ್ಟುವ ಆಂತರಿಕ ಒತ್ತಡವನ್ನು ನಾವು ಮನಗಂಡೆವು. ಆದರೆ ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರವಾಗಿ ಮೊದಲು ಪೋಷಕರು ತಮ್ಮ ಮಕ್ಕಳ ಸಾಧನೆಗಳನ್ನು ಮನಸ್ಸಿನಿಂದ ಸ್ವೀಕರಿಸಿ, ಅವರ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ನಿಮ್ಮ ಮಗುವಿನ ಪ್ರಯತ್ನವನ್ನು ಪ್ರಶಂಸಿಸಿ, ಅಂಕಗಳೊಂದಿಗೆ ಹೋಲಿಸುವ ಬದಲು ಅವರ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಬೇಕು.
ಇಂದಿನ ಕೆಲವೊಂದು ಶಾಲೆಗಳು ಕೇವಲ ವಿದ್ಯಾರ್ಥಿಗಳ ಕಲಿಕೆಗೆ ಆಧರಿಸಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡುತ್ತಿರುವ ಘಟನೆಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ, ಇಂತಹ ದೋರಣೆಗಳಿಗೆ ಕಡಿವಾಣ ಹಾಕಬೇಕಿದೆ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿ ಕ್ರೀಡೆಯಲ್ಲೂ ಅಥವಾ ಇತರ ಕ್ಷೇತ್ರದಲ್ಲೂ ಹಿಂದಿರಬೇಕೆಂದಿಲ್ಲ ಅದೇ ರೀತಿ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿ ಇತರ ಕ್ಷೇತ್ರದಲ್ಲೂ ಅಗ್ರಮಾನ್ಯರಾಗಿರಬೇಕೆಂದಿಲ್ಲ ಎಂಬ ವಾಸ್ತವತೆಯನ್ನು ಅರಿತು ವಿದ್ಯಾರ್ಥಿಗಳಲ್ಲಿ ಸ್ತುಭ್ಧವಾಗಿರುವ, ಅಡಕವಾಗಿರುವ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಪ್ರಯತ್ನಗಳಿಗೆ ಶಿಕ್ಷಕರು ನಾಂದಿಹಾಡಬೇಕಿದೆ.
ಶಾಲೆಗಳಲ್ಲಿ ಮತ್ತು ಸಮಾಜದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೂ ವಿದ್ಯಾರ್ಥಿಗಳಲ್ಲಿ ಒತ್ತಡವಲ್ಲದ ಹೋರಾಟಮಯ ಮನೋಭಾವನೆಗೆ ದಾರಿ ತೋರಬೇಕು. ಶಿಕ್ಷಕರು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಬಲಪಡಿಸುವ ಮಾತುಗಳ ಮೂಲಕ, ಅವರಲ್ಲಿ ಸ್ಪೂರ್ತಿ ಮೂಡಿಸಬೇಕು. ಪ್ರತಿಯೊಂದು ಫಲಿತಾಂಶವನ್ನು ಅನುಭವದ ಭಾಗವಾಗಿ ನೋಡಬೇಕು, ವಿಫಲತೆಗಳನ್ನು ಬದುಕಿನ ಪಾಠಗಳಂತೆ ಅಂಗೀಕರಿಸಬೇಕು.
"ಫಲಿತಾಂಶಕ್ಕಿಂತ ನೀವು ಮಾಡಿದ ಪ್ರಯತ್ನ ಅದು ಶ್ರೇಷ್ಠ ಮತ್ತು ಅದುವೇ ನಿಮ್ಮ ವಿಜಯದ ಮೊದಲ ಹೆಜ್ಜೆ, ನೀವು ಯಾವತ್ತಿದ್ದರು ನಮ್ಮ ಹೆಮ್ಮೆ ನಿಮ್ಮ ಶ್ರಮವನ್ನು ನಾವು ಮೆಚ್ಚುತ್ತೇವೆ" ಎಂಬ ಸ್ಫೂರ್ತಿದಾಯಕ ಮಾತುಗಳೊಂದಿಗೆ ಮಕ್ಕಳನ್ನು ಹುರಿತುಂಬಿಸುವ ಕೆಲಸ ಪೋಷಕರು ಮತ್ತು ಶಿಕ್ಷಕರು ಸದಾ ಮಾಡುತ್ತಿರಬೇಕು.
ಇನ್ನು ಕುಟುಂಬದ ನೀರಿಕ್ಷೆಗಳಿಂದ, ತಮ್ಮಲ್ಲೇ ಕೊರಗಿ ಮೂಖರಾಗಿ ಕೊನೆಗೆ ಜೀವನವನ್ನೇ ತೊರೆಯುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮೊರೆ ಹೋಗುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ನೇರ ಸಂಭಾಷಣೆ ಮಾಡುವುದು ಅತ್ಯಂತ ಮುಖ್ಯವಾಗಿಬಿಟ್ಟಿದೆ. ಅವರು ತಮ್ಮ ಭಾವನೆಗಳನ್ನು ನಿರ್ಭಯವಾಗಿ ಹಂಚಿಕೊಳ್ಳಲು ಅವಕಾಶ ನೀಡಬೇಕು. ಮನೆಯ ವಾತಾವರಣ ಪ್ರೀತಿ, ನಂಬಿಕೆ ಮತ್ತು ಸಹಾನುಭೂತಿಯ ಆಧಾರವಾಗಿರಬೇಕು. ಹೀಗೆ ಒಬ್ಬ ವಿದ್ಯಾರ್ಥಿ ತನ್ನ ಹೃದಯದ ಮಾತುಗಳನ್ನು ಹೆತ್ತವರೊಡನೆ ಹೇಳಿಕೊಳ್ಳಲು ಧೈರ್ಯ ಪಡೆಯುತ್ತಾನೆ.
ಇನ್ನು ತೀರ ಪ್ರಮುಖ ಅಂಶವೆಂದರೆ ಸಮಾಜದ ಜವಾಬ್ದಾರಿ. ಬೇರೆಯವರ ಮಕ್ಕಳೊಂದಿಗೆ ನಮ್ಮ ಮಕ್ಕಳನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ವಿಶಿಷ್ಟ ಗುಣವನ್ನು ಹೊಂದಿರುವ ವ್ಯಕ್ತಿ. ಪ್ರತಿಯೊಬ್ಬನ ಸಾಧನೆಗೆ ಹಾರೈಸುವ ಮನೋಭಾವನೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಮಾಧ್ಯಮಗಳು ಕೂಡ ಅಂಕಗಳ ಮೇಲೆ ಮಾತ್ರ ಆಧಾರಿತ ವರದಿಗಳನ್ನು ಮಾಡದೆ, ಮಕ್ಕಳ ನೈತಿಕ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಯ ಕಡೆಯೂ ಗಮನ ಹರಿಸಬೇಕು.
ಅಂತಿಮವಾಗಿ ಅಂಕಗಳು ಬದುಕಿನ ಅಂತಿಮ ಗುರಿಯಲ್ಲ, ಬದುಕು ಕಲಿಕೆಗಳಿಂದ ಹೆಣೆಯಬೇಕಾದ ಪಯಣ. ಒಂದು ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಯ ಮೌಲ್ಯವನ್ನು ನಿರ್ಧರಿಸುವುದಿಲ್ಲ ಬದಲಾಗಿ ವಿದ್ಯಾರ್ಥಿಯ ಸತ್ಪ್ರಯತ್ನಗಳಲ್ಲಿ ಅವರ ಕನಸುಗಳಲ್ಲಿ ಶ್ರೇಷ್ಠತೆ ಅಡಗಿರುತ್ತದೆ ಎಂಬ ಸಂದೇಶ ಸಮಾಜದ ಸಜ್ಜನರಾದ ನಾವು ವಿದ್ಯಾರ್ಥಿಗಳಿಗೆ ಅರ್ಥೈಸಿಕೊಡಬೇಕು.
ನಮ್ಮ ಮುಂದಿನ ಪೀಳಿಗೆ ಭರವಸೆಯ ಬೆಳಕಿನಲ್ಲಿ ಬೆಳೆಯಲಿ ಯಾವುದೇ ಮೌನ ಕೂಗು ನಮ್ಮ ಹೃದಯವನ್ನು ತೂರದಿರಲಿ ಎಂಬುದೊಂದೇ ಈ ಲೇಖನದ ಆಶಯ.
What's Your Reaction?
Like
4
Dislike
1
Love
2
Funny
0
Angry
1
Sad
0
Wow
2



