ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿ ಇಲ್ಲ: ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ

Feb 21, 2026 - 12:05
ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿ ಇಲ್ಲ: ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನದಲ್ಲೇ ಅಂದರೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಟೋಲ್ ಪ್ಲಾಝಾ ದಾಟುವ ವಾಹನಗಳು ಅಧಿಕೃತ ಫಾಸ್ಟ್ಯಾಗ್ ಹೊಂದಿಲ್ಲದಿದ್ದಲ್ಲಿ, ನಗದು ರೂಪದಲ್ಲಿ ಪಾವತಿಸುವಾಗ ಅನ್ವಯವಾಗುವ ಸುಂಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಯುಪಿಐ ಮೂಲಕ ಪಾವತಿಸುವುದಾದಲ್ಲಿ ಆಯಾ ವಾಹನ ವರ್ಗಕ್ಕೆ ಅನ್ವಯವಾಗುವ ಸುಂಕದ 1.25 ಪಟ್ಟು ತೆರಬೇಕಾಗುತ್ತದೆ. 

"ನಗದು ಪಾವತಿಯನ್ನು ಕಡಿಮೆ ಮಾಡುವ ಸಲುವಾಗಿ ಯುಪಿಐ ಮೂಲಕ ಪಾವತಿಯನ್ನು ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಸಂಗ್ರಹವಾಗುವ ಒಟ್ಟು ಸುಂಕದ ಪೈಕಿ ಶೇಕಡ 2ರಷ್ಟು ಯುಪಿಐ ಮೂಲಕ ಸಂಗ್ರಹವಾಗುತ್ತಿದೆ. ಶೇಕಡ 1ರಷ್ಟು ಪಾವತಿಯಾಗುತ್ತಿರುವ ನಗದು ಪಾವತಿಯನ್ನು ಇದೀಗ ಸ್ಥಗಿತಗೊಳಿಸಲಾಗುತ್ತಿದೆ. ತಿಂಗಳುಗಳ ಹಿಂದೆ ಅರ್ಧದಷ್ಟು ಸಂಗ್ರಹ ನಗದು ರೂಪದಲ್ಲಿ ಆಗುತ್ತಿತ್ತು. ಎಲ್ಲ ಟೋಲ್ ಪ್ಲಾಝಾಗಳಲ್ಲಿ ಯುಪಿಐ ವ್ಯವಸ್ಥೆ ಇದೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಏ.1ರಿಂದ ನಗದು ಪಾವತಿಯನ್ನು ಸ್ಥಗಿತಗೊಳಿಸಿದ ಬಳಿಕ, ವ್ಯಾಪಕವಾಗಿ ನಗದು ರೂಪದಲ್ಲಿ ಪಾವತಿಯಾಗುತ್ತಿರುವ ದಂಡ ಮೊತ್ತದ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಓವರ್‌ಲೋಡ್ ಮತ್ತಿತರ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ಹೆಚ್ಚಾಗಿ ನಗದು ರೂಪದಲ್ಲೇ ಪಾವತಿಸಲಾಗುತ್ತಿದೆ. ಈ ದಂಡ ಪಾವತಿಯನ್ನು ಕೂಡಾ ಹೆಚ್ಚು ತಾರ್ಕಿಕಗೊಳಿಸುವ ಮತ್ತು ನಗದು ರಹಿತ ವ್ಯವಹಾರವನ್ನು ಸುಗಮಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ವಿವರಿಸಿದ್ದಾರೆ. 

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 0