ಮಂಜೇಶ್ವರ: ತಂದೆಯಿಂದ ಮಗಳ ಹತ್ಯೆ; ಚಿಕಿತ್ಸೆ ಫಲಿಸದೆ ಸಂಬಂಧಿಯೂ ಸಾವು
ಕಾಸರಗೋಡು: ಮಂಜೇಶ್ವರದ ಕುಂಚತ್ತೂರಿನಲ್ಲಿ 18 ವರ್ಷದ ಜುಮೈಲಾ ಎಂಬಾಕೆಯನ್ನು ತಂದೆಯೇ ಕತ್ತಿಯಿಂದ ಇರಿದು ಕೊಂದ ಘಟನೆಗೆ ಸಂಬಂಧಿಸಿದಂತೆ, ದಾಳಿಯ ವೇಳೆ ಗಾಯಗೊಂಡಿದ್ದ ಸಂಬಂಧಿ ಶೇಖ್ ಅಬ್ಬಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾಗಿದ್ದಾರೆ.
ಕೊಲೆ ನಡೆದ ಘಟನೆ ನಿನ್ನೆ ಸಂಜೆ ಸಂಭವಿಸಿತ್ತು. ಬಾಯಾರು ನಿವಾಸಿ ಉಮರ್ ಫಾರೂಕ್ ಮತ್ತು ತಾಹಿರಾ ದಂಪತಿಯ ಏಕೈಕ ಪುತ್ರಿ ಜುಮೈಲಾ ಕೊಲೆಯಾದ ದುರ್ದೈವಿ.
ಘಟನೆಯ ಹಿನ್ನೆಲೆ:
ಆರೋಪಿ ಉಮರ್ ಫಾರೂಕ್ ಮಾದಕ ವ್ಯಸನಿಯಾಗಿದ್ದು, ಈತನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ತಾಹಿರಾ ಮತ್ತು ಮಗಳು ಜುಮೈಲಾ ಕುಂಚತ್ತೂರು ತೂಮಿನಾಡಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಉಮರ್ ಮತ್ತು ತಾಹಿರಾ ನಡುವೆ ವಿಚ್ಛೇದನ ಪ್ರಕರಣ ನಡೆಯುತ್ತಿದ್ದು, ತಾಹಿರಾ ಮತ್ತು ಮಗಳ ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಕುಟುಂಬಸ್ಥರು ಉಮರ್ ಬಳಿ ಒತ್ತಾಯಿಸಿದ್ದರು.
ಈ ನಡುವೆ, ತಾಹಿರಾ ಹೆಸರಿನಲ್ಲಿರುವ ಜಾಗವನ್ನು ತನ್ನ ಹೆಸರಿಗೆ ವರ್ಗಾಯಿಸಬೇಕೆಂದು ಉಮರ್ ಪಟ್ಟು ಹಿಡಿದಿದ್ದನು. ಆದರೆ ತಾಹಿರಾ ಅವರು ಆ ಜಾಗವನ್ನು ಮಗಳು ಜುಮೈಲಾ ಹೆಸರಿಗೆ ಬರೆಯುವುದಾಗಿ ತಿಳಿಸಿದ್ದರು. ಈ ಬಗ್ಗೆ ಚರ್ಚಿಸಲು ಉಮರ್ ತನ್ನ ಸಹೋದರನೊಂದಿಗೆ ತೂಮಿನಾಡಿನ ಮನೆಗೆ ಬಂದಿದ್ದನು. ಚರ್ಚೆಯ ವೇಳೆ ಜಾಗವನ್ನು ತನ್ನ ಹೆಸರಿಗೆ ನೀಡಲು ನಿರಾಕರಿಸಿದಾಗ ಉಮರ್ ಆಕ್ರೋಶಗೊಂಡು ತನ್ನಲ್ಲಿದ್ದ ಕತ್ತಿಯಿಂದ ದಾಳಿ ಮಾಡಿದ್ದಾನೆ.
ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂದು ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಿದ್ದಾರೆ. ಮೃತ ಜುಮೈಲಾಳ ಮರಣೋತ್ತರ ಪರೀಕ್ಷೆಯೂ ಇಂದು ನಡೆಯಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
1



