ಶೇಖ್ ಹಸೀನಾ ಅವರೇ ಬಾಂಗ್ಲಾ ದಂಗೆ ಹಿಂದಿನ ಮಾಸ್ಟರ್‌ಮೈಂಡ್.: ಕೋರ್ಟ್ ತೀರ್ಪು
ಢಾಕಾ: ಕಳೆದ ವರ್ಷದ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಕುರಿತಂತೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಇಬ್ಬರು ಸಹಾಯಕರ ವಿರುದ್ದದ ಪ್ರಕರಣ ತೀರ್ಪನ್ನು ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಸೋಮವಾರ (ನ.17) ಪ್ರಕಟಿಸಿದೆ.
ಶೇಖ್ ಹಸೀನಾ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಹಸೀನಾ ವಿರುದ್ದ ಅಪರಾಧ ಸಾಬೀತು ಮಾಡಲು ಸಾಕಷ್ಟು ಪುರಾವೆಗಳಿಗೆ ಎಂದು ಪೀಠ ಹೇಳಿದೆ. 453 ಪುಟಗಳು ಮತ್ತು ಆರು ಭಾಗಗಳನ್ನು ಒಳಗೊಂಡಿರುವ ತೀರ್ಪನ್ನು ನ್ಯಾಯಾಧೀಶರು ಪ್ರಕಟಿಸಿದರು.
2024 ರ ಜುಲೈ-ಆಗಸ್ಟ್ ಪ್ರತಿಭಟನೆಗಳಲ್ಲಿ ಸುಮಾರು 1,400 ಜನರು ಸಾವನ್ನಪ್ಪಿ, ಸುಮಾರು 24,000 ಜನರು ಗಾಯಗೊಂಡರು ಎಂದು ಐಸಿಟಿ ನ್ಯಾಯಾಧೀಶರು ಹೇಳಿದ್ದಾರೆ. ಶೇಖ್ ಹಸೀನಾ ಅವರು ರಜಾಕರ್ ಹೇಳಿಕೆ ನೀಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಾ.ರೆ ಜನರನ್ನು ದೇಶದ ಶತ್ರುಗಳೆಂಬ ಹಣೆಪಟ್ಟಿ ಕಟ್ಟಿದ್ದಾರೆ ಎಂದು ಕೋರ್ಟ್ ಹೇಳಿದೆ.
ಶೇಖ್ ಹಸೀನಾ ಅವರ ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಂದೂಕುಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ ಮಾರಕ ಆಯುಧಗಳನ್ನು ಬಳಸಿತು, ಇದರ ಪರಿಣಾಮವಾಗಿ ವ್ಯಾಪಕ ಹಿಂಸಾಚಾರ ಮತ್ತು ಹಾನಿ ಉಂಟಾಯಿತು ಎಂದು ಪೀಠ ಗಮನಿಸಿದೆ.
ಹೆಲಿಕಾಪ್ಟರ್ ಬಳಸಿ ಹತ್ಯೆ
ಪ್ರತಿಭಟನಾಕಾರರನ್ನು ಕೊಲ್ಲಲು ಹೆಲಿಕಾಪ್ಟರ್‌ಗಳು, ಮಾರಕ ಆಯುಧಗಳನ್ನು ಬಳಸಲು ಹಸೀನಾ ಆದೇಶಿಸಿದರು ಎಂದು ಐಸಿಟಿಯ ನ್ಯಾಯಾಧೀಶರಲ್ಲಿ ಒಬ್ಬರು ಹೇಳಿದರು. ಹಸೀನಾ ಮತ್ತು ದಕ್ಷಿಣ ಢಾಕಾ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಜಿ ಮೇಯರ್ ನಡುವಿನ ಸಂಭಾಷಣೆಯನ್ನು ಅವರು ತೀರ್ಪಿನಲ್ಲಿ ಓದಿದರು.
ಆಗಸ್ಟ್ 5 ರಂದು ಢಾಕಾದಲ್ಲಿ ಬಾಂಗ್ಲಾದೇಶ ಸೇನೆಯು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿತು. ಪ್ರತಿಭಟನಾಕಾರರನ್ನು ಬೆದರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಯಿತು. ಗಾಯಗೊಂಡ ಪ್ರತಿಭಟನಾಕಾರರಿಗೆ ವೈದ್ಯಕೀಯ ನೆರವು ಮತ್ತು ಚಿಕಿತ್ಸೆಯನ್ನು ನಿರಾಕರಿಸಲಾಗಿದೆ ಎಂದು ಪೀಠ ಹೇಳಿದೆ.
ಆಗಿನ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಾಲ್ ಮತ್ತು ಪೊಲೀಸ್ ಮಹಾನಿರ್ದೇಶಕ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಜೊತೆ ಸೇರಿ ಹಸೀನಾ ಸಾಮೂಹಿಕವಾಗಿ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ನ್ಯಾಯಮಂಡಳಿ ಹೇಳಿದೆ. ಪ್ರಕರಣದಲ್ಲಿ ಬೆದರಿಕೆ, ವಿದ್ಯಾರ್ಥಿಗಳ ಮೇಲಿನ ಚಿತ್ರಹಿಂಸೆ ಮತ್ತು ಅವರ ಆಡಳಿತದ ಅವಧಿಯಲ್ಲಿ ಪೊಲೀಸರು ಗುಂಡು ಹಾರಿಸುವುದನ್ನು ತೋರಿಸುವ ವೀಡಿಯೊ ಪುರಾವೆಗಳಿವೆ ಎಂದಿದೆ.
ಜುಲೈ-ಆಗಸ್ಟ್ 2024 ರ ಪ್ರತಿಭಟನೆಗಳ ಸಂದರ್ಭದಲ್ಲಿ ಶೇಖ್ ಹಸೀನಾ ಅವರು ಅಧಿಕಾರಕ್ಕೆ ಅಂಟಿಕೊಳ್ಳಲು ಬಲಪ್ರಯೋಗ ಮಾಡಿದರು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಳೆದ ವರ್ಷದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ದೌರ್ಜನ್ಯಗಳ ಹಿಂದಿನ ʼಮಾಸ್ಟರ್‌ಮೈಂಡ್ʼ ಮತ್ತು ಪ್ರಮುಖ ರೂವಾರಿ ಶೇಖ್ ಹಸೀನಾ ಅವರೇ ಎಂದು ಕೋರ್ಟ್ ಹೇಳಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



