ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ 25ರಷ್ಟು ತೆರಿಗೆ:ಟ್ರಂಪ್ ಎಚ್ಚರಿಕೆ

Jan 13, 2026 - 10:03
ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ 25ರಷ್ಟು ತೆರಿಗೆ:ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಇರಾನ್‌ನೊಂದಿಗೆ ವಾಣಿಜ್ಯ ಸಂಬಂಧ ಹೊಂದಿರುವ ದೇಶಗಳ ಮೇಲೆ 25 ಪ್ರತಿಶತ ಹೆಚ್ಚುವರಿ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿರುವುದಾಗಿ ತಿಳಿಸಿರುವ ಟ್ರಂಪ್, ಅಮೆರಿಕದ ಈ ಕ್ರಮವು ಇರಾನ್ ಮೇಲೆ ತೀವ್ರವಾದ ಒತ್ತಡವನ್ನು ಉಂಟುಮಾಡಲಿದೆ ಎಂದು ಹೇಳಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕ್ರಮದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸುಂಕ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ಘೋಷಣೆಯು ಪ್ರಮುಖವಾಗಿ ಭಾರತ, ಚೀನಾ, ಯುಎಇ ಮತ್ತು ಟರ್ಕಿ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಭಾರತದ ಮೇಲೆ ಅಮೆರಿಕ 25 ಪ್ರತಿಶತ ದಂಡ ಸುಂಕವನ್ನು ವಿಧಿಸಿದೆ. ಈಗಿನ 25 ಪ್ರತಿಶತ ಹೊಸ ಸುಂಕ ಮತ್ತು ಹಳೆಯ 25 ಪ್ರತಿಶತ ದಂಡ ಸುಂಕ ಸೇರಿ ಒಟ್ಟು 50 ಪ್ರತಿಶತ ಸುಂಕವನ್ನು ಅಮೆರಿಕ ಭಾರತದ ಮೇಲೆ ಹೇರಿದಂತಾಗಿದೆ.

ಅದೇ ಸಮಯದಲ್ಲಿ, ಇರಾನ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನಡೆದ ರಕ್ತಪಾತವು ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಮಧ್ಯಪ್ರವೇಶಿಸಲು ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಅವಕಾಶವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಘರ್ಷಣೆಯಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿಗಳ ನೆನಪಿಗಾಗಿ ಇರಾನ್ ಸರ್ಕಾರ ಮೂರು ದಿನಗಳ ಕಾಲ ದೇಶಾದ್ಯಂತ ಶೋಕಾಚರಣೆಯನ್ನು ಘೋಷಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0