ಎಸ್‌ಎಸ್‌ಎಫ್ ಶುಕ್ರವಾರ ಸೌಹಾರ್ದ ನಡಿಗೆ: 'ಧರ್ಮ ಉಳಿಯಲಿ, ಧರ್ಮಾಂಧತೆ ಅಳಿಯಲಿ'

Jun 28, 2025 - 10:37
ಎಸ್‌ಎಸ್‌ಎಫ್ ಶುಕ್ರವಾರ ಸೌಹಾರ್ದ ನಡಿಗೆ: 'ಧರ್ಮ ಉಳಿಯಲಿ, ಧರ್ಮಾಂಧತೆ ಅಳಿಯಲಿ'

ಹೂವಿನಹಡಗಲಿ: ಪಟ್ಟಣದಲ್ಲಿ ಸುನ್ನಿ ಸ್ಟುಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್) ವತಿಯಿಂದ ಶುಕ್ರವಾರ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರೇಮಲ್ಲನಕೆರೆ ಮಠದಿಂದ ಆರಂಭವಾದ ಸೌಹಾರ್ದ ನಡಿಗೆ ಅಂಬೇಡ್ಕರ್ ವೃತ್ತ, ಶಾಸ್ತ್ರಿ ವೃತ್ತ ಮೂಲಕ ತೇರು ಹನುಮಪ್ಪ ದೇವಸ್ಥಾನ ತಲುಪಿತು.
ಮಠಾಧೀಶರು, ಚರ್ಚ್ ನ ಫಾದರ್, ಮುಸ್ಲಿಂ ಧರ್ಮಗುರುಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಎಸ್‌ಎಸ್‌ಎಫ್ ರಾಜ್ಯ ಘಟಕದ ಅಧ್ಯಕ್ಷ ಸೋಫಿಯಾನ ಸಖಾಪಿ ಮಾತನಾಡಿ,
ಸೌಹಾರ್ದತೆಯಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ. ದೇಶ ಉಳಿಯಬೇಕಾದರೆ ಸಂವಿಧಾನ, ಪ್ರೀತಿ, ಧರ್ಮಗಳು ಉಳಿಯಬೇಕು. ಧರ್ಮಾಂಧತೆ ಅಳಿಯಬೇಕು.
ಕರ್ನಾಟಕವೆಂಬ ಸ್ವರ್ಗದಲ್ಲಿ ಬದುಕುವ ನಾವು ಜಾತಿವಾದ, ಕೋಮುವಾದದಿಂದ ಬದುಕನ್ನು ನರಕ ಮಾಡಿಕೊಳ್ಳಬಾರದು. ಸರ್ವ ಜನಾಂಗದ ಶಾಂತಿಯ ತೋಟ ಬರೀ ಭಾಷಣಕ್ಕೆ ಸೀಮಿತವಾಗಬಾರದು. ಅದು ಹೃದಯದ ಬಡಿತ, ನಾಡಿ ಮಿಡಿತವಾಗಬೇಕು. ಈ ದಿಸೆಯಲ್ಲಿ ಸೌಹಾರ್ದ ಮೂಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಂದು ಹೇಳಿದರು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ಗಾಡಿತಾತ, ನಾಗತಿಬಸಾಪುರದ ಗಿರಿರಾಜ ಹಾಲಸ್ವಾಮೀಜಿ, ಮಂಜುನಾಥಯ್ಯ ಹಾಲಸ್ವಾಮೀಜಿ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ, ಕಾರ್ಮೆಲ್ ಚರ್ಚ್ ನ ಫಾ. ಡೆಂಜಿಲ್ ವೇಗಸ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಗೌರವ ಅಧ್ಯಕ್ಷ ಎಂ.ಪಿ.ಎಂ. ಅಶೋಕ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ವಾರದ ಗೌಸ್ ಮೊಹಿದ್ದೀನ್, ಡಾ. ಬಿ.ಟಿ.ಫಣಿರಾಜ, ಸಿ.ಚಾಂದಸಾಹೇಬ್, ಕೆ.ಗೌಸ್ ಮೊಹಿದ್ದೀನ್, ಡಿ.ಚಂದ್ರಶೇಖರ್ ನಾಯ್ಕ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0