ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎಂಟು ಆರೋಪಿಗಳನ್ನು ಬಂಧಿಸಲಾಗಿದೆ: ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್

May 3, 2025 - 18:54
ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎಂಟು ಆರೋಪಿಗಳನ್ನು ಬಂಧಿಸಲಾಗಿದೆ: ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್ ಹೇಳಿದ್ದಾರೆ.

ಆರೋಪಿಗಳ ವಿವರ ನೀಡಿದ ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್, ಕಿನ್ನಿಪದವಿನಲ್ಲಿ ಮೇ 1 ರಂದು ರಾತ್ರಿ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಕಿನ್ನಿಪದವಿನಲ್ಲಿ ವಾಸವಾಗಿರುವ ಪೇಜಾವರ ಗ್ರಾಮದ‌ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ ( 29), ಶಾಂತಿಗುಡ್ಡೆಯ ನಿಯಾಜ್ (28), ಕೆಂಜಾರು ಗ್ರಾಮದ ಮೊಹಮ್ಮದ್ ಮುಝಮಿಲ್ (32), ಕಳವಾರು ಕುರ್ಸುಗುಡ್ಡೆಯ ಕಲಂದರ್ ಶಾಫಿ (31), ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ರುದ್ರಪಾದೆಯ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಹಾಗೂ ಕಾಟಿಪಳ್ಳ ಮಂಗಳಪೇಟೆಯ ಅದಿಲ್ ಮೆಹರೂಫ್ ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಸಫ್ವಾನ್ ಮೇಲೆ 2023ರಲ್ಲಿ ಸುರತ್ಕಲ್‌ ನಲ್ಲಿ ಸುಹಾಸ್ ಶೆಟ್ಟಿ ಸಹಚರ ಪ್ರಶಾಂತ್ ಹಾಗೂ ಧನರಾಜ್ ಮತ್ತಿತರರು ಹಲ್ಲೆ ನಡೆಸಿದ್ದರು. ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಸಫ್ವಾನ್ ಗೆ ಇತ್ತು. ಆತ 2022ರಲ್ಲಿ ಸುರತ್ಕಲ್‌ನಲ್ಲಿ ಕೊಲೆಯಾಗಿದ್ದ ಮಹಮ್ಮದ್ ಫಾಝಿಲ್ ಸೋದರ ಆದಿಲ್‌ ನನ್ನು ಈಚೆಗೆ ಸಂಪರ್ಕಿಸಿದ್ದ. ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಸಲುವಾಗಿ ಆದಿಲ್ ₹ 5 ಲಕ್ಷ ನೀಡಲು ಒಪ್ಪಿದ್ದ‌ , ₹ 3 ಲಕ್ಷ ನೀಡಿದ್ದ ಎಂದರು.

ಸದ್ಯಕ್ಕೆ ಕೃತ್ಯ ಎಸಗಿದ ಮತ್ತು ಸುಪಾರಿ ನೀಡಿದ ಒಟ್ಟು ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಎಸಿಪಿ ಮತ್ತು ಉತ್ತರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯುತ್ತೇವೆ. ಅವರ ವಿಚಾರಣೆ ಬಳಿಕ ಹತ್ಯೆಯ ಸಮಗ್ರ ವಿವರ ಸಿಗಲಿದೆ ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2