ಕರ್ನಾಟಕದಿಂದ ಬಿಹಾರಕ್ಕೆ ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ: ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

Nov 3, 2025 - 11:01
ಕರ್ನಾಟಕದಿಂದ ಬಿಹಾರಕ್ಕೆ ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ: ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

ಬೆಂಗಳೂರು: "ಬಿಹಾರದ ಅಭಿವೃದ್ಧಿಗಾಗಿ ಮಹಾಘಟಬಂಧನ್ ಗೆ ಮತ ನೀಡಿ ಹಾಗೂ ನಿಮ್ಮ ಸಂಬಂಧಿಕರಿಗೂ ನಮಗೆ ಮತ ನೀಡುವಂತೆ ತಿಳಿಸಿ. ನಿಮ್ಮ ರಾಜ್ಯದ ಅಭಿವೃದ್ಧಿಗಾಗಿ ಮತ ಚಲಾವಣೆ ಮಾಡಬೇಕು. ಮತವನ್ನು ವ್ಯರ್ಥ ಮಾಡಬಾರದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.

ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ನನಗೆ ದೊಡ್ಡ ಸ್ಥಾನ ಬೇಕು ಎಂದು ನೀವೆಲ್ಲರೂ ಹೇಳಿದ್ದೀರಿ. ನನಗೆ ಅದು ಮುಖ್ಯವಲ್ಲ. ಬಿಹಾರದಲ್ಲಿ ಮಹಾಘಟ ಬಂಧನ ಅಧಿಕಾರಕ್ಕೆ ತಂದರೆ ನನಗೆ ಎಲ್ಲಾ ಸ್ಥಾನವನ್ನು ನೀವು ಕೊಟ್ಟಂತೆ. ನಿಮ್ಮ ಒಂದೊಂದು ಮತವೂ ಮಹಾಘಟಬಂದನ್ ಅಧಿಕಾರಕ್ಕೆ ಬರಲು ಮುಖ್ಯವಾದುದು" ಎಂದರು.

"ಈ ಮೊದಲಿನಂತೆ ನಿತೀಶ್ ಕುಮಾರ್ ಅವರ ಕೈಯಲ್ಲಿ ಬಿಹಾರವಿಲ್ಲ. ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಬಿಹಾರದ‌ ಅಭಿವೃದ್ಧಿಗೆ ಲಾಲುಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ" ಎಂದರು.

"ರಾಹುಲ್ ಗಾಂಧಿಯವರನ್ನು ಈ ದೇಶದ ಪ್ರಧಾನಿಯಾಗಿ ಮಾಡಬೇಕು. ನೆಹರು ಅವರ ಕುಟುಂಬ ಈ ದೇಶಕ್ಕೆ ತನ್ನದೇ ಆದ ಕೊಡುಗೆ ‌ನೀಡಿದೆ. ಈ ಕಾರಣಕ್ಕೆ ಅವರಿಗೆ ನೀವು ಶಕ್ತಿ ನೀಡಬೇಕು. ತೇಜಸ್ವಿ ಯಾದವ್ ಅವರನ್ನ ಬೆಂಬಲಿಸಬೇಕು" ಎಂದರು.

ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ ‌ನೀಡಲು ಸೂಚನೆ

"ಬಿಹಾರದಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ನಿಮ್ಮ ಊರಿನಲ್ಲಿರುವವರ ಬದುಕನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನೀವುಗಳು ಇಲ್ಲಿ ಬದುಕು ಕಟ್ಟಿಕೊಂಡಿರಬಹುದು. ಆದರೆ ನಿಮ್ಮ ಮತಗಳು ಅಲ್ಲಿರಬಹುದು. ಅಥವಾ ನಿಮ್ಮ ಸಂಬಂಧಿಕರು ಅಲ್ಲಿರಬಹುದು. ಅವರಿಗೆ ಮತದಾನ ಮಾಡಲು ನೀವು ತಿಳಿಸಿ. ನೀವುಗಳು ಸಹ ಮತದಾನ ಮಾಡಲು ಊರಿಗೆ ತೆರಳಿ. ನಿಮಗೆಲ್ಲರಿಗು ಮೂರು ದಿನ ರಜೆ ನೀಡುವಂತೆ ನೀವುಗಳು ಕೆಲಸ ನಿರ್ವಹಿಸುವ ಸಂಸ್ಥೆಗಳು, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ" ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕನ್ನಡದಲ್ಲಿ ಮಾಡಿದ ಭಾಷಣವನ್ನು ‌ಬಿಹಾರಿ ಭಾಷೆಗೆ ತರ್ಜುಮೆ ಮಾಡಲು ಹೋದಾಗ "ನಾವು ಬಿಹಾರಿಗಳಲ್ಲ, ಕನ್ನಡದ ಬಿಹಾರಿಗಳು" ಎಂದು ಸಭಿಕರು ಹೇಳಿದರು. "1 ನೇ ತಾರೀಕು ರಾಜ್ಯೋತ್ಸವ ‌ಆಚರಿಸಿದ್ದೇವೆ. ನೀವು ಕನ್ನಡ ಕಲಿತಿರುವುದು ನೋಡಿದರೆ ಸಂತಸವಾಗುತ್ತಿದೆ" ಎಂದು ಶಿವಕುಮಾರ್ ಅವರು ಹೇಳಿದರು.

ಟನಲ್‌ ರಸ್ತೆ ವಿಚಾರವಾಗಿ ಟೀಕಿಸಿದ ತೇಜಸ್ವಿ ಸೂರ್ಯ ಅವರ ತೇಜೋವಧೆ ಮಾಡಲಾಗಿದೆ ಎಂದು ಕೇಳಿದಾಗ, "ನಾನು ಯಾರ ಮೇಲೂ ಸಹ ವೈಯಕ್ತಿಕ ಟೀಕೆ ಮಾಡಿಲ್ಲ. ತೇಜಸ್ವಿ ಸೂರ್ಯ ಅವರ ಮಾತುಗಳು ಎಳಸುತನದಿಂದ ಕೂಡಿದ್ದವು. ಟನಲ್ ರಸ್ತೆ ಬಗ್ಗೆ ಅವರ ಪಕ್ಷದ ಹಿರಿಯ ನಾಯಕರಾದ ನಿತಿನ್ ಗಡ್ಕರಿ ಅವರ ಹೇಳಿಕೆಗಳನ್ನು ಕೇಳಬೇಕು. ಮುಂಬೈ, ಕಾಶ್ಮೀರದಲ್ಲಿನ ಟನಲ್‌ ರಸ್ತೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಟನಲ್ ರಸ್ತೆ ಕೇಂದ್ರ ಸರ್ಕಾರದ ಸಲಹೆ ಕೂಡ ಹೌದು. ಈ ವಿಚಾರದಿಂದ ಬಿಜೆಪಿಯವರ ನಿಜವಾದ ಬಣ್ಣ ಬಯಲಾಗುತ್ತಿದೆ‌. ಬೆಂಗಳೂರಿನ ಅಭಿವೃದ್ಧಿ ವಿರುದ್ದ ಬಿಜೆಪಿಯಿದೆ" ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0