ಡಿಸೆಂಬರ್‌ನಲ್ಲಿ ಕೆಕೆಆರ್‌ಟಿಸಿ ರಜತ ಮಹೋತ್ಸವ: ಅರುಣಕುಮಾರ ಪಾಟೀಲ

Nov 1, 2025 - 12:48
ಡಿಸೆಂಬರ್‌ನಲ್ಲಿ ಕೆಕೆಆರ್‌ಟಿಸಿ ರಜತ ಮಹೋತ್ಸವ: ಅರುಣಕುಮಾರ ಪಾಟೀಲ

ಕಲಬುರಗಿ: 'ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪನೆಯಾಗಿ 25 ವರ್ಷಗಳು ತುಂಬಿದ್ದು, ಡಿಸೆಂಬರ್‌ ತಿಂಗಳ 1 ಅಥವಾ 5ರಂದು ರಜತ ಮಹೋತ್ಸವ ಆಚರಿಸಲಾಗುವುದು' ಎಂದು ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

'ಕೆಎಸ್‌ಆರ್‌ಟಿಸಿಯಿಂದ 2000ನೇ ಇಸ್ವಿಯಲ್ಲಿ ಬೇರ್ಪಡಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪಿಸಲಾಗಿತ್ತು. 2021ರಲ್ಲಿ ಅದನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಮರು ನಾಮಕರಣ ಮಾಡಲಾಗಿತು' ಎಂದರು.

'ಸದ್ಯ ಕೆಕೆಆರ್‌ಟಿಸಿಯಲ್ಲಿ 9 ವಿಭಾಗ, 53 ಘಟಕಗಳು ಹಾಗೂ 165 ಬಸ್‌ ನಿಲ್ದಾಣಗಳು, ಎರಡು ತರಬೇತಿ ಕೇಂದ್ರಗಳು, ಒಂದು ಪ್ರಾದೇಶಿಕ ವರ್ಕ್‌ಶಾಪ್‌, 9 ವಿಭಾಗೀಯ ವರ್ಕ್‌ಶಾಪ್‌ಗಳನ್ನು ಒಳಗೊಂಡಿದೆ. ನಿಗಮದಲ್ಲಿ ಸದ್ಯ 19,383 ಕಾಯಂ ಹಾಗೂ 1,592 ಗುತ್ತಿಗೆ ಆಧಾರಿತ ನೌಕರರಿದ್ದಾರೆ' ಎಂದರು.

'ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸದ್ಯ 750 ಹೊಸ ಬಸ್‌ಗಳ ಅಗತ್ಯವಿದೆ. ಬಜೆಟ್‌ನಲ್ಲಿ 400 ಬಸ್‌ಗಳನ್ನು ಕೆಕೆಆರ್‌ಡಿಬಿ ಅನುದಾನ ಹಾಗೂ 350 ಬಸ್‌ಗಳನ್ನು ನಿಗಮದಿಂದ ಖರೀದಿಸಲು ಸಿದ್ಧತೆ ನಡೆದಿದೆ' ಎಂದರು.

'ನಿಗಮದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಕೆಕೆಆರ್‌ಟಿಸಿಯ ಹಳೇ ಕಟ್ಟಡ ಇರುವ ಸ್ಥಳದಲ್ಲಿ ₹ 20 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ‌ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಸಂಪುಟದ ಅನುಮೋದನೆ ಸಿಗಬೇಕಿದೆ' ಎಂದರು.

'ಕಲಬುರಗಿ ಕಂದಾಯ ವಿಭಾಗ. ಈ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಲಬುರಗಿಯ ನಾಲ್ಕು ಕಡೆ ಸ್ಯಾಟಲೈಟ್‌ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ರೂಪರೇಷೆ ಸಿದ್ಧಪಡಿಸಲಾಗಿದೆ' ಎಂದರು.

ಅಧಿಕಾರ ವಹಿಸಿಕೊಂಡ ಬಳಿಕ ಕೆಕೆಆರ್‌ಟಿಸಿಯ ರಜತ ಮಹೋತ್ಸವದ 'ಲೋಗೊ'ವನ್ನು ಗಣ್ಯರು ಅನಾವರಣಗೊಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0