ತಾವೇ ಹೆಚ್ಚಿಸಿದ್ದ ಜಿಎಸ್‌ಟಿಯನ್ನು ಕಡಿತಗೊಳಿಸಿ ಕೇಂದ್ರ ಸರಕಾರ ಬೆನ್ನುತಟ್ಟಿಕೊಳ್ಳುತ್ತಿದೆ : ಸಿದ್ದರಾಮಯ್ಯ

Oct 3, 2025 - 17:57
ತಾವೇ ಹೆಚ್ಚಿಸಿದ್ದ ಜಿಎಸ್‌ಟಿಯನ್ನು ಕಡಿತಗೊಳಿಸಿ ಕೇಂದ್ರ ಸರಕಾರ ಬೆನ್ನುತಟ್ಟಿಕೊಳ್ಳುತ್ತಿದೆ : ಸಿದ್ದರಾಮಯ್ಯ

ಮೈಸೂರು: ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್‌ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಎಸ್ ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 2017 ರಲ್ಲಿ ಕೇಂದ್ರ ಸರಕಾರವೇ ಜಿಎಸ್ ಟಿ ಯನ್ನು ಜಾರಿಗೆ ತಂದು ಜಿಎಸ್ ಟಿ ದರ ನಿಗದಿಪಡಿಸಿದರು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, ಜಿಎಸ್ ಟಿ ಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಮತಾಂತರ ಹಾಗೂ ಜಾತಿಒಡೆಯುವ ದೃಷ್ಠಿಯಿಂದ ಸಮೀಕ್ಷೆಯನ್ನು ಸರಕಾರ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರ ಸರಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವಿದೆ. ಕಾಂತರಾಜು ವರದಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಎಂಬಿತ್ಯಾದಿ ಜಾತಿಗಳನ್ನು ನಮೂದಿಸಲಾಗಿತ್ತು. ಜನರು ತಮ್ಮ ಜಾತಿಯನ್ನು ಸ್ವಯಂಪ್ರೇರಿತರಾಗಿ ನಮೂದಿಸಿದರೆ ಅದಕ್ಕೆ ಸರಕಾರ ಜವಾಬ್ದಾರವಾಗುವುದಿಲ್ಲ. ಆದರೆ ಆಯೋಗ, ಈ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಹೇಳುವ ಜಾತಿಯ ಮಾಹಿತಿಯನ್ನು ಆಯೋಗ ಪಡೆಯಲಿದೆ. ಇದರಲ್ಲಿ ಜಾತಿ ಒಡೆಯುವ ಪ್ರಶ್ನೆಯಿಲ್ಲ. ಜನರನ್ನು ರಾಜಕೀಯ ಉದ್ದೇಶದಿಂದ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0