ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ

Aug 4, 2025 - 10:15
ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ

ಮಂಡ್ಯ: “ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್” ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಭಾನುವಾರ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ರು. ಆದರೆ, ಈಗ ಅದನ್ನು ಹೇಳೋಕೆ ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು” ಎಂದು ತಿಳಿಸಿದರು.

“ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಟಿಪ್ಪು ಮಸೀದಿ ಇದೆ, ಪಕ್ಕದಲ್ಲಿ ದೇವಸ್ಥಾನ ಇದೆ. ಈಕಡೆ ಅಲ್ಲವೋ ಅಕ್ಬರ್ ಅಂತಾರೆ, ಆಕಡೆ ಗಂಟೆ ಟಣ್, ಟಣ್ ಅನ್ನುತ್ತೆ. ಎರಡನ್ನು ಕೇಳ್ತಿದ್ರು ಅವರು. ಟಿಪ್ಪು ಸಮಚಿತ್ತರಾಗಿದ್ದವರು. ದೇವದಾಸಿ ಪದ್ಧತಿಯನ್ನು ರದ್ದು ಮಾಡಿದ್ರು. ಶೋಷಿತ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡಲಾಗುತ್ತಿತ್ತು. ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದ್ದು ಟಿಪ್ಪು. ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ” ಎಂದು ಹೇಳಿದರು.

“ಭಾರತ ದೇಶಕ್ಕೆ ಸಿರಿಕಲ್ಚರ್ ರೇಷ್ಮೆ ತಂದಿದ್ದೇ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವಾತಂತ್ರ್ಯ ಸೇನಾನಿ. ಮೈಸೂರಿನ ಅರಮನೆ ಇದ್ದಿದ್ದು ಶ್ರೀರಂಗಪಟ್ಟಣದಲ್ಲೇ” ಎಂದು ಸಚಿವರು ಹೇಳಿದರು

“ಹೋರಾಟಕ್ಕೆ ಮುನ್ನುಡಿ ಬರೆದವರು ಅಂಬೇಡ್ಕರ್. ಶಿಕ್ಷಣ, ಹೋರಾಟದ ಮಂತ್ರ ಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್. ಸಾಮಾಜಿಕ, ಆರ್ಥಿಕ, ಸಮಾನತೆ ಇಲ್ಲದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಅಲ್ಲ ಅಂತ ಅಂಬೇಡ್ಕರ್ ಹೇಳಿದ್ದಾರೆ. ಎಲ್ಲರಿಗೂ ಸಮಾನತೆಯ ಹಕ್ಕು ಕೊಟ್ಟರು. ಜಾತಿ, ಧರ್ಮದ ಹೆಸರಲ್ಲಿ ಮಾತ್ರ ಇನ್ನೂ ಜಗಳ ನಡೆಯುತ್ತಿದೆ. ಸಂವಿಧಾನವನ್ನು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಓದಬೇಕು‌. ಕೆಲವು ಎಂಎಲ್ಎಗಳಿಗೆ ಸಂವಿಧಾನದ ಬಗ್ಗೆ ಗೊತ್ತೇ ಇಲ್ಲ. ವಿದ್ಯೆಯೇ ಅಧಿಕಾರ, ಶಕ್ತಿ. ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ಬಂದವರು” ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0