ಮುಖ್ಯ ಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆ ಕುಡಿವ ನೀರಿನ ಟ್ಯಾಂಕಿಗೆ ವಿಷ: ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಅರೆಸ್ಟ್
ಮಕ್ಕಳು ಮೃತಪಟ್ಟರೆ ಅನ್ಯಧರ್ಮ ಶಿಕ್ಷಕ ವರ್ಗ ಆಗ್ತಾನೆಂದು ಸಂಚು ಬೆಳಗಾವಿ ಪೊಲೀಸರಿಂದ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಅರೆಸ್ಟ್
ಬೆಳಗಾವಿ: ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ವಿಷ ಬೆರೆಸಿದ ಕಿರಾತಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬೇರೆ ಧರ್ಮಕ್ಕೆ ಸೇರಿದ ಮುಖ್ಯ ಶಿಕ್ಷಕನನ್ನು ಬೇರೆಡೆಗೆ ವರ್ಗ ಮಾಡಿಸಲು ಹೀನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷಯುಕ್ತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದರು. ಈ ಪ್ರಕರಣದಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಹೂಲಿಕಟ್ಟಿ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲನನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ ಗುಳೇದ ಸುದ್ದಿಗೋಷ್ಠಿ ನಡೆಸಿ, ಮುಖ್ಯ ಶಿಕ್ಷಕನನ್ನು ಶಾಲೆಯಿಂದ
ಓಡಿಸಲು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ವಿಷ ಮಿಶ್ರಿತ ನೀರುಸೇವಿಸಿ ಮಕ್ಕಳು ಮೃತಪಟ್ಟರೆ ಅದಕ್ಕೆ ಮುಖ್ಯ ಶಿಕ್ಷಕ ಹೊಣೆಯಾಗಿ ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂದು ಬಂಧಿತರು ಸಂಚು ರೂಪಿಸಿದ್ದರು ಎಂದರು.
ಸಾಗರ ಸಕ್ರೆಪ್ಪ
ಆರೋಪಿಸಾಗರ ಪಾಟೀಲ ವಿಷ ಬೆರೆಸಲು ಕೃಷ್ಣಾ ಮಾದರ ಎಂಬಾತನಿಗೆ ಹೇಳಿದ್ದ. ಕೃಷ್ಣಾ ಅನ್ಯಜಾತಿ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ ಆರೋಪಿಗಳು ನಾವು ಹೇಳುವ ಕೆಲಸ ಮಾಡದಿದ್ದರೆ ನಿನ್ನ ಪ್ರೀತಿಯ ವಿಷಯ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿ ನೀರಿನಲ್ಲಿ ವಿಷ ಬೆರೆಸಲು ಕೃಷ್ಣಾ ಒಪ್ಪಿಕೊಂಡಿದ್ದ. ಶಾಲೆಯ ಅಮಾಯಕ ಬಾಲಕನಿಗೆ ಚಾಕೋಲೆಟ್, ಕುರ್‌ಕುರೆ ಮತ್ತು ₹500 ನೀಡಿ ಕೃತ್ಯಕ್ಕೆ ಪ್ರಚೋ ದನೆ ನೀಡಿದ್ದರು. ಆಮಿಷಕ್ಕೆ ಒಳಗಾಗಿದ್ದ ಬಾಲಕ ಶಾಲಾ ಆವರಣ ದಲ್ಲಿದ್ದ ಟ್ಯಾಂಕರ್‌ನಲ್ಲಿ ವಿಷ ಬೆರೆಸಿ ಬಾಟಲಿ ಅಲ್ಲೇ ಎಸೆದಿದ್ದ.
ವಿಷ ಬೆರೆಸಿದ ನಂತರ ಮಕ್ಕಳು ಅದೇ ನೀರು ಕುಡಿದು ಜುಲೈ 14 ರಂದು ಅಸ್ವಸ್ಥರಾಗಿದ್ದರು. ಅಸ್ವಸ್ಥರಾದ 11 ಮಕ್ಕಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಹಾಗೂ ನಾಗನಗೌಡ ಪಾಟೀಲ್‌ರನ್ನು ಬಂಧಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



