ಪುತ್ತೂರು | ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

Jun 27, 2025 - 09:51
ಪುತ್ತೂರು | ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎನ್ನುವರ ಪುತ್ರ ಕೃಷ್ಣ ರಾವ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.

ಆರೋಪಿ ಕೃಷ್ಣ, ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಇದೀಗ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಸಂಬಂಧ ಇದೀಗ ಯುವತಿ, ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡಿರುವ ಪೊಲೀಸರು ಶ್ರೀಕೃಷ್ಣನ ಪತ್ತೆಗೆ ಬಲೆ ಬೀಸಿದ್ದಾರೆ.

ಮಂಗಳೂರಿನ ಖಾಸಗಿ ಕಾಲೇಜಿನ Bsc ವ್ಯಾಸಂಗ ಮಾಡುತ್ತಿರುವ ಯುವತಿ ಹಾಗೂ ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ಓದುವಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆ 2024ರ ಅಕ್ಟೋಬರ್‌ 11ರಂದು ಶ್ರೀಕೃಷ್ಣ ಮನೆಗೆ ಕರೆದು ಮದುವೆಯಾಗುತ್ತೇನೆ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೇ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಬಳಿಕ ಯುವತಿ ಗರ್ಭಿಣಿಯಾದ ವಿಚಾರ ತಿಳಿದು ಕೃಷ್ಣ ಮದುವೆಗೆ ನಿರಾಕರಣೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಈತನಿಂದ ವಂಚನೆಗೆ ಒಳಗಾದ ಯುವತಿಯೂ ಪುತ್ತೂರಿನ ನಿವಾಸಿಯಾಗಿದ್ದು, ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿಯು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯುವತಿಯನ್ನು ಮನೆಗೆ ಕರೆತಂದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ನೊಂದ ಯುವತಿ ಜೂನ್ 24ರಂದು ರಾತ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಕೃಷ್ಣ ರಾವ್ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ಜೆ. ರಾವ್ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0