ರಫಾಹ್‌ನಲ್ಲಿ ಆಹಾರಕ್ಕಾಗಿ ಬಂದ ಪ್ಯಾಲೆಸ್ತೀನಿಗರ ಮೇಲೆ ಇಸ್ರೇಲ್ ದಾಳಿ: 56 ಮಂದಿ ಹತ್ಯೆ

Jun 17, 2025 - 09:42
ರಫಾಹ್‌ನಲ್ಲಿ ಆಹಾರಕ್ಕಾಗಿ ಬಂದ ಪ್ಯಾಲೆಸ್ತೀನಿಗರ ಮೇಲೆ ಇಸ್ರೇಲ್ ದಾಳಿ: 56 ಮಂದಿ ಹತ್ಯೆ

ಯುನೈಟೆಡ್ ನೇಶನ್ಸ್ ಹಕ್ಕುಗಳ ಮುಖ್ಯಸ್ಥ ವೊಲ್ಕರ್ ಟರ್ಕ್ ಅವರ ಪ್ರಕಾರ, ಇಸ್ರೇಲ್‌ನ ಯುದ್ಧ ವಿಧಾನಗಳು ಪ್ಯಾಲೆಸ್ಟೀನಿಗರ ಮೇಲೆ ಭೀಕರ ಮತ್ತು ಅಸಹನೀಯ ನಷ್ಟವನ್ನು ಉಂಟುಮಾಡುತ್ತಿದೆ.

ಗಾಜಾ: ದಕ್ಷಿಣ ಗಾಜಾದ ರಫಾಹ್ ಪ್ರದೇಶದಲ್ಲಿ ಸಹಾಯ ವಿತರಣಾ ಕೇಂದ್ರಗಳ ಬಳಿ ಆಹಾರಕ್ಕಾಗಿ ಕಾಯುತ್ತಿದ್ದವರಿಗೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 56 ಪ್ಯಾಲೆಸ್ತೀನಿಗರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ವರದಿ ಮಾಡಿವೆ. ಮೃತಪಟ್ಟವರಲ್ಲಿ 38 ಮಂದಿ ಆಹಾರ ಪಡೆಯಲು ಬಂದಿದ್ದವರು ಎಂದು ತಿಳಿದು ಬಂದಿದೆ.

ಈ ದಾಳಿ ಗಾಜಾ ಹ್ಯೂಮನೇಟೇರಿಯನ್ ಫೌಂಡೇಶನ್ (GHF) ನಡೆಸುವ ವಿತರಣಾ ಕೇಂದ್ರಗಳ ಬಳಿ ನಡೆದಿದ್ದು, ಈ ಕೇಂದ್ರಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ಬೆಂಬಲಿಸುತ್ತವೆ. ಈ ಪ್ರದೇಶಗಳನ್ನು ಇಸ್ರೇಲ್ ಸೇನೆ ಬಿಗಿಯಾಗಿ ನಿಯಂತ್ರಿಸುತ್ತಿದ್ದು, ಈ ಕೇಂದ್ರಗಳನ್ನು ಟೀಕಾಕಾರರು "ಮಾನವ ಕೊಲೆಮಾಡುವ ಸ್ಥಳಗಳು" ಎಂದು ಕರೆದಿದ್ದಾರೆ.

GHF ಕಾರ್ಯಾರಂಭದಿಂದ ಈಗಾಗಲೇ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದನ್ನು ಪ್ರಶ್ನಿಸಿರುವ ಯುನೈಟೆಡ್ ನೇಷನ್ಸ್ ಮಾನವ ಹಕ್ಕುಗಳ ಮುಖ್ಯಸ್ಥ ವೊಲ್ಕರ್ ಟರ್ಕ್ ಅವರು ಸೋಮವಾರ ಮಾತನಾಡುತ್ತಾ, "ಇಸ್ರೇಲ್‌ನ ಯುದ್ಧ ವಿಧಾನಗಳು ಗಾಜಾದ ಪ್ಯಾಲೆಸ್ತೀನಿಗರಿಗೆ ಭೀಕರವಾದ ಮತ್ತು ಅಸಹನೀಯ ಸಂಕಷ್ಟಗಳನ್ನುಂಟು ಮಾಡುತ್ತಿವೆ" ಎಂದರು.

ಗಾಜಾದ ಆರೋಗ್ಯ ಇಲಾಖೆ ಪ್ರಕಾರ, ಕಳೆದ 20 ತಿಂಗಳಲ್ಲಿ ಇಸ್ರೇಲ್ ದಾಳಿಗಳಲ್ಲಿ 55,362 ಪ್ಯಾಲೆಸ್ತೀನಿಗರು, ಅವರಲ್ಲೂ ಸಾವಿರಾರು ಮಕ್ಕಳು ಸಾವನ್ನಪ್ಪಿದ್ದಾರೆ.

 "ಬೆಳಿಗ್ಗೆ 4 ಗಂಟೆ ಸುಮಾರಿಗೆ ರಫಾಹ್‌ನ ಫ್ಲಾಗ್ ರೌಂಡ್‌ಅಬೌಟ್ ಬಳಿ ಇಸ್ರೇಲ್ ದಾಳಿ ನಡೆಯಿತು. ಜನರು ನೆಲದ ಮೇಲೆ ಬಿದ್ದರು, ಎಲ್ಲೆಡೆಯಿಂದಲೂ ಗುಂಡುಬಾರಿಯಾಯಿತು," ಎಂದು ಪೀಡಿತರಾದ ಹೆಬಾ ಜೌಡಾ ಮತ್ತು ಮೊಹಮ್ಮದ್ ಅಬೆದ್ ಎಂಬವರು ಅಸೋಸಿಯೇಟೆಡ್ ಪ್ರೆಸ್‌ಗೆ ವಿವರಿಸಿದ್ದಾರೆ.

 “ದಿನದಿಂದ ದಿನಕ್ಕೆ ಸ್ಥಿತಿ ಇನ್ನಷ್ಟು ಭಯಾನಕವಾಗುತ್ತಿದೆ,” ಎಂದು ಜೌಡಾ ಕಣ್ಣೀರುಗೆರೆಯುತ್ತಾ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0