ಹಾವೇರಿ |ಅತ್ಯಾಚಾರ ಆರೋಪಿಗಳ ರೋಡ್ ಶೋ: ಐವರು ಪೊಲೀಸ್ ವಶಕ್ಕೆ
ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ‘ರೋಡ್ ಶೋ’ ನಡೆಸಿ ಪುಂಡಾಟಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಈಗ ಮತ್ತೆ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಇಂದು ಹಾವೇರಿಯಲ್ಲಿ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿತ್ತು. ಜಾಮೀನು ನೀಡುವಾಗ, “ಮತ್ತೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಕೂಡದು ಮತ್ತು ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗಬೇಕು” ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದಂತೆ, ಈ ಆರೋಪಿಗಳು ರೋಡ್ ಶೋ ನಡೆಸಿ, ಪುಂಡಾಟಿಕೆ ಮಾಡಿದ್ದರು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾವೇರಿ ಪೊಲೀಸರು ಮುಂದಾಗಿದ್ದಾರೆ.
ಹಾವೇರಿಯ ಪ್ರವಾಸಿ ಮಂದಿರದ ಮುಂಭಾಗದ ರಸ್ತೆಯಲ್ಲಿಯೇ ಖಾಕಿ ಪಡೆ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. ರೋಡ್ ಶೋ ನಡೆಸಿದ್ದ 7 ಪ್ರಮುಖ ಆರೋಪಿಗಳಲ್ಲಿ ಈ ಐವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಹಾನಗಲ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0



