ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಶೀಘ್ರದಲ್ಲೇ ಜಾರಿಯಾಗಲಿ ; ಎಸ್‌ವೈಎಸ್ ದ.ಕ.ಜಿಲ್ಲಾ ಸಮಿತಿ ಒತ್ತಾಯ

May 7, 2025 - 19:59
ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಶೀಘ್ರದಲ್ಲೇ ಜಾರಿಯಾಗಲಿ ; ಎಸ್‌ವೈಎಸ್ ದ.ಕ.ಜಿಲ್ಲಾ ಸಮಿತಿ ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಹೆಚ್ಚುತ್ತಿರುವ ಕೋಮು ದ್ವೇಷ ಭಾಷಣಗಳು, ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವಂತೆ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವ ಜನಪ್ರತಿನಿಧಿಗಳ ವರ್ತನೆಗಳು, ಅಮಾಯಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ದಾಳಿ ನಡೆಸುತ್ತಿರುವ ಕಿಡಿಗೇಡಿಗಳು, ವಿನಾಕಾರಣ  ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿ ಸಾರ್ವಜನಿಕ ಆಸ್ತಿ ಪಾಸ್ತಿ ಗಳಿಗೆ ಹಾನಿಮಾಡುತ್ತಿರುವವರು , ಕೊಲೆ ಕೊಳ್ಳೆ ನಡೆಸಲು ಯುವಕರನ್ನು‌ ಪ್ರಚೋದಿಸುತ್ತಿರುವವರು ಹೆಚ್ಚಾಗುತ್ತಲೇ ಇದ್ದು, ಅಂತವರನ್ನು ಹತೋಟಿಯಲ್ಲಿಡಲು ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಬೇಕೆಂದು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಒತ್ತಾಯಿಸಿದರು. ಅವರು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯು ಆಯೋಜಿಸಿದ್ದ 'ಸೌಹಾರ್ದತೆಗಾಗಿ ಅಂಚೆ ಕಾರ್ಡ್ ಚಳುವಳಿ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಜಿಲ್ಲಾ ಸೋಷಿಯಲ್ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್‌ಪದವು ಮಾತನಾಡಿ, ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮಗಳು ಆಗುತ್ತಲೇ ಇಲ್ಲ. ನಾಮಕಾವಸ್ಥೆಗೆ ಕೆಲವರ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಮತ್ತೆ ಮತ್ತೆ ರಾಜಾರೋಷವಾಗಿ ತಿರುಗಾಡುತ್ತಾ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಲೇ ಇದ್ದು, ದಯವಿಟ್ಟು ಇಂತಹವರ ಮೇಲೆ ಕಠಿಣವಾದ ಕ್ರಮ ಕೈಗೊಂಡು ಜಿಲ್ಲೆಯ ಜನತೆಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. 

ಜಿಲ್ಲಾ ಸಂಘಟನಾ ಉಪಾಧ್ಯಕ್ಷ ತೌಸೀಫ್ ಸ‌ಅದಿ ಹರೇಕಳ ಮಾತನಾಡಿ, ಈ ಸರಕಾರ ಬಂದ ಪ್ರಾರಂಭದಲ್ಲಿ ಸಮಾಜ ಘಾತುಕರನ್ನು ಮಟ್ಟ ಹಾಕಲು ಆಂಟಿ ಕಮ್ಯೂನಲ್ ವಿಂಗನ್ನು ಗ್ರಹ ಸಚಿವರು ಘೋಷಣೆ ಮಾಡಿದ್ದರೂ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಈಗ ಮತ್ತೊಮ್ಮೆ ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸನ್ನು ರಚನೆ ಮಾಡುತ್ತೇವೆಂದು ಘೋಷಿಸಿದ್ದು ಸ್ವಾಗತಾರ್ಹವಾಗಿದ್ದು, ಮುಖ್ಯಮಂತ್ರಿಯವರು ನೇರವಾಗಿ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮಾತನಾಡಿ, ಜಿಲ್ಲೆಯ ಸೌಹಾರ್ದ ಪರಂಪರೆಗೆ ಕಳಂಕವನ್ನುಂಟುಮಾಡುವ ಪ್ರಯತ್ನ ನಡೆಯುತ್ತಿದ್ದು, 'ಸೌಹಾರ್ದತೆಗಾಗಿ ಅಂಚೆ ಕಾರ್ಡ್ ಚಳುವಳಿ'ಯು ಯಶಸ್ಸು ಕಂಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನಾಯಕರಾದ ಉಮರ್ ಮದನಿ ಬೋಳಿಯಾರ್, ಹಕೀಂ ಪೂಮಣ್ಣು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0