ಸಂಘಪರಿವಾರದ ಗುಂಪು ಹತ್ಯೆ ಪ್ರಕರಣ ಮುಚ್ಚಿ ಹಾಕಲು ಮಂಗಳೂರು ಕಮಿಷನರೇಟ್ ಪೊಲೀಸ್ ಯತ್ನ: ಮುನೀರ್ ಕಾಟಿಪಳ್ಳ

Apr 30, 2025 - 19:09
ಸಂಘಪರಿವಾರದ ಗುಂಪು ಹತ್ಯೆ ಪ್ರಕರಣ ಮುಚ್ಚಿ ಹಾಕಲು ಮಂಗಳೂರು ಕಮಿಷನರೇಟ್ ಪೊಲೀಸ್ ಯತ್ನ: ಮುನೀರ್ ಕಾಟಿಪಳ್ಳ

ಮಂಗಳೂರು: ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಮಂಗಳೂರು ಕಮಿಷನರೇಟ್ ಪೊಲೀಸ್ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ ಎಂದು ಆರೋಪಿಸಿರುವ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಗಂಭೀರ ಕರ್ತವ್ಯ ಲೋಪ ಎಸಗಿರುವ ವಾಮಂಜೂರು ಠಾಣಾಧಿಕಾರಿ ಶಿವ ಪ್ರಸಾದ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರನ್ನು ಅಮಾನತುಗಳಿಸಬೇಕು ಎಂದು ಒತ್ತಾಯಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಿಪಿಐ ಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ,ಕುಡುಪು ಸಾಮ್ರಾಟ್ ಮೈದಾನದಲ್ಲಿ ಎ.27ರಂದು ಸಂಜೆ ಮೂರು ಗಂಟೆ ವೇಳೆ ಮಾಬ್ ಲಿಂಚಿಂಗ್ ಗೆ ಅಪರಿಚಿತ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ ಎಂಬ ಸುದ್ದಿ ವಾಮಂಜೂರು ಪೊಲೀಸ್ ಠಾಣೆಗೆ ಕೃತ್ಯ ನಡೆದ ಗಂಟೆಯ ಒಳಗಡೆ ತಲುಪಿತ್ತು. ಅದರಂತೆ ಐದು ಗಂಟೆಯ ಆಸುಪಾಸು ಪೊಲೀಸರು ಹೊಡೆತಗಳಿಂದ ಜರ್ಜರಿತಗೊಂಡ ಮೃತದೇಹ ಬಿದ್ದಿದ್ದ ಸ್ಥಳವನ್ನೂ ತಲುಪಿದ್ದಾರೆ. ಅಷ್ಟೊತ್ತಿಗೆ ಪೊಲೀಸರಿಗೆ ನಡೆದಿರುವ ಘಟನೆಯ ಸಂಪೂರ್ಣ ವಿವರ ಮನದಟ್ಟಾಗಿದೆ. ವಿಷಯ ಕಮಿಷನರ್ ಅವರಿಗೂ ಸಹಜವಾಗಿ ತಲುಪಿದೆ. ಆದರೆ, ವಿವಿಧ ಕಾರಣಗಳಿಗೆ( ಹಲ್ಲೆಕೋರ ಗುಂಪಿನ ನಾಯಕ, ಬಿಜೆಪಿ ಪ್ರಭಾವಿ ಮುಖಂಡ ರವೀಂದ್ರ ನಾಯಕ್, ಮಂಜುನಾಥ್ ಮತ್ತಿತರರು ಸ್ಥಳೀಯ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು, ಮಾಬ್ ಲಿಂಚಿಂಗ್ ದೊಡ್ಡ ಸುದ್ದಿಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದರೆ ಕಮಿಷನರ್ ಗೆ ಕಳಂಕ ಬರುವುದು…) ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ, ಸಾಧ್ಯವಾದರೆ ಮುಚ್ಚಿಹಾಕುವ ತೀರ್ಮಾನಕ್ಕೆ ಬಂದಿದ್ದಾರೆ. ಅದರ ಭಾಗವಾಗಿಯೇ, ಮಾಬ್ ಲಿಂಚಿಂಗ್ ನಲ್ಲಿ ಪ್ರಮಖ ಪಾತ್ರ ವಹಿಸಿದ ಮಂಜುನಾಥನಿಂದಲೇ ‘ಅಪರಿಚಿತ ಶವ ಪತ್ತೆ’ ಎಂದು ದೂರು ಬರೆಸಿಕೊಂಡು ಯುಡಿಆರ್ ದಾಖಲಿಸಿದ್ದಾರೆ. ಘಟನೆಯ ಪೂರ್ತಿ ವಿವರ ಗೊತ್ತಿದ್ದರೂ “ಯಾವುದೋ ನಶೆ(ಅಮಲು)ಯಿಂದ ಬಿದ್ದು, ಅಥವಾ ಯಾರೊಂದಿಗೊ ಜಗಳವಾಡಿ, ಉರುಳಿ ಬಿದ್ದು ಮೃತಪಟ್ಟಿರಬಹುದು, ಮೈಯಲ್ಲಿ ತರಚಿದ ಸಾಮಾನ್ಯ ಗಾಯಗಳಿವೆ” ಎಂದು ಲುಕ್ ಔಟ್ ಪ್ರಕಟನೆ ಹೊರಡಿಸಿ ಕೈತೊಳೆದು ಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಬ್ ಲಿಂಚಿಂಗ್ ನಡೆದಿರುವ ಕುರಿತು ಮಾಧ್ಯಮಗಳ ಪ್ರತಿನಿಧಿಗಳಿಗೆ ಸುದ್ದಿ ತಲುಪಿ, ಪೊಲೀಸ್ ಕಮಿಷನರ್ ಅವರಲ್ಲಿ ಈ ಕುರಿತು ಮಾಹಿತಿ, ಸ್ಪಷ್ಟೀಕರಣವನ್ನು ಸತತವಾಗಿ ಕೇಳಿದರೂ, “ವದಂತಿಗಳಿಗೆ ಕಿವಿಗೊಡಬೇಡಿ, ಕಾಯಿರಿ” ಎಂಬ ಒಂದು ಲೈನ್ ನ ಉತ್ತರವನ್ನು ನೀಡಿ 36 ತಾಸುಗಳ ಕಾಲ ಮೌನವೃತ ಪಾಲಿಸಿದ್ದಾರೆ. ಮರುದಿನ (ಎಪ್ರಿಲ್ 28) ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಈ ಕುರಿತು ಧ್ವನಿ ಎತ್ತಿದ ತರುವಾಯ, ಸಾಮಾಜಿಕ ಜಾಲತಾಣದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆಗಳು ಶುರುವಾದ ಮೇಲೆಯಷ್ಟೆ ಕಮಿಷನರ್ ಅನುಪಮ್ ಅಗ್ರವಾಲ್ ಪೋಸ್ಟ್ ಮಾರ್ಟಂ ನಡೆಸಿ, ಅದರ ವರದಿಯ ಆಧಾರದಲ್ಲಿ ಕೊಲೆ, ಮಾಬ್ ಲಿಂಚಿಂಗ್ ಸೆಕ್ಷನ್ ಅಡಿ FIR ದಾಖಲಿಸಿಕೊಂಡಿದ್ದಾರೆ. ಈ FIR ದಾಖಲಾಗುವಾಗ ಘಟನೆ ನಡೆದು 32 ತಾಸು ದಾಟಿತ್ತು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

FIR ದಾಖಲಿಸಲು ಎರಡನೇ ದೂರುದಾರರಾಗಿ ಪೊಲೀಸರು ಆಯ್ಕೆ ಮಾಡಿದ್ದು, ಮಾಬ್ ಲಿಂಚಿಂಗ್ ಮಾಡಿದ ಅದೇ ಕುಖ್ಯಾತ ಕೋಮುವಾದಿ ಗ್ಯಾಂಗ್ ನ ಒಡನಾಟದಲ್ಲಿ ಇರುವ, ಆಪ್ತನೇ ಆಗಿರುವ ಕೇಶವ ಎಂಬಾತನನ್ನು. ಆತ ನೀಡಿದ ದೂರಿನಲ್ಲಿ, ಪೊಲೀಸರು ಮೊದಲು ದೂರು ಬರೆಸಿಕೊಂಡ ಮಂಜುನಾಥ್ ಈ ಗುಂಪು ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದ (ಈಗ ಬಂಧಿಸಲ್ಪಟ್ಟಿದ್ದಾನೆ) ಎಂದು ಮುನೀರ್ ಕಾಟಪಳ್ಳ ಹೇಳಿದ್ದಾರೆ.

ಕೇಶವ ನೀಡಿನ ದೂರಿನ ಪ್ರಕಾರ FIRನಲ್ಲಿ “ಅಪರಿಚಿತ ವ್ಯಕ್ತಿಯೊಬ್ಬ “ಪಾಕಿಸ್ತಾನ, ಪಾಕಿಸ್ತಾನ”(ಝಿಂದಾಬಾದ್ ಹಾಕಿದ್ದಾನೆ ಎಂದು ಇಲ್ಲ) ಎಂದು ಬೊಬ್ಬೆ ಹೊಡೆಯುತ್ತಾ ಮೈದಾನದ ಕಡೆಗೆ ಧಾವಿಸಿ ಬರುತ್ತಿದ್ದ, ಇದನ್ನು ಗಮನಿಸಿದ ಮಂಜುನಾಥ, ಸಚಿನ್ ಮತ್ತಿತರರು ಆತ ಪಾಕಿಸ್ತಾನ… ಎಂದು ಬೊಬ್ಬೆ ಹಾಕುತ್ತಿದ್ದಾನೆ, ಬಿಡಬಾರದು ಎಂದು ನನ್ನಲ್ಲಿ ಹೇಳಿದರು, ಬೆನ್ನಟ್ಟಿ ಹೋಗಿ ಗುಂಪಾಗಿ ಥಳಿಸಿದರು, ಮರದ ತುಂಡಿನಿಂದ, ಕಾಲಿನಿಂದ ಹೊಡೆದು ತುಳಿದು ಸಾಯಿಸಿದರು, ನಾನು ತಡೆಯಲು ಯತ್ನಿಸಿದರೆ, ನನಗೆ ಗದರಿಸಿದರು. ನಾನು ಸ್ಥಳದಿಂದ ತೆರಳಿದೆ. ರಾತ್ರಿ ಮನೆಯಲ್ಲಿದ್ದಾಗ ಮೃತದೇಹ ಪತ್ತೆಯಾಗಿರುವ ಕುರಿತು ಸ್ವತಃ ಮಂಜುನಾಥ ಪೊಲೀಸ್ ದೂರು ನೀಡಿರುವುದು ನನಗೆ ತಿಳಿದು ಬಂತು” ಎಂದು ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಗುಂಪು ಹತ್ಯೆ ನಡೆದ ತರುವಾಯದ 32 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಎಲ್ಲಾ ಬೆಳವಣಿಗೆಗಳ ಕುರಿತು ಪ್ರತ್ಯೇಕ ತನಿಖೆ ನಡೆಯಬೇಕಿದೆ. ಗುಂಪು ಹತ್ಯೆ ನಡೆದಿರುವುದು, ಅದರಲ್ಲಿ ಭಾಗಿಯಾಗಿರುವ ಗುಂಪಿನ ಪೂರ್ಣ ಮಾಹಿತಿ ಇದ್ದೂ, ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೇ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ ಔಟ್ ಪ್ರಕಟಟನೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮಿಷನರ್ ಮಾಧ್ಯಮದವರಿಗೂ ಮಾಹಿತಿ ನೀಡದೆ ಮೌನ ವಹಿಸಿದ್ದು, ಎರಡನೇ ದಿನ ಸಾರ್ವಜನಿಕರು ಬಲವಾಗಿ ಪ್ರಶ್ನಿಸತೊಡಗಿದ ತರುವಾಯವಷ್ಟೇ ಪೋಸ್ಟ್ ಮಾರ್ಟಂ ಮಾಡಿಸಿದ್ದು, ಎರಡನೆಯ ದೂರುದಾರನಾಗಿ ಗುಂಪು ಹತ್ಯೆಯ ತಂಡದ ಒಡನಾಟದಲ್ಲಿರುವ ಕೇಶವ ಎಂಬಾತನನ್ನು ಆಯ್ಕೆ ಮಾಡಿಕೊಂಡದ್ದು, ಆತ 30 ಗಂಟೆಗಳ ತರುವಾಯ ನೀಡಿದ ದೂರಿನಲ್ಲಿ ಪಾಕಿಸ್ತಾನದ ಉಲ್ಲೇಖ ಇರುವುದು ಪೊಲೀಸ್ ಇಲಾಖೆ ಪ್ರಕರಣವನ್ನು ಮುಚ್ಚಿಹಾಕುವ, ಮಾಬ್ ಲಿಂಚಿಂಗ್ ನ ಕೋಮುವಾದಿ ಗೂಂಡಾ ಪಡೆಯನ್ನು ರಕ್ಷಿಸುವ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಒದಗಿಸುತ್ತದೆ. ಪೊಲೀಸರಿಗೆ ಇಂತಹ ಅತಿ ಗಂಭೀರ ಪ್ರಕರಣದಲ್ಲಿ ದೂರು ಬರೆಸಿಕೊಳ್ಳಲು ಪ್ರಕರಣದಲ್ಲಿ ಭಾಗಿಯಾದ ಗುಂಪಿನ ಸದಸ್ಯರಲ್ಲದೆ ಬೇರೆ ಯಾರೂ ಸಿಗಲಿಲ್ಲವೆ, ಸುವೊಮಟೊ ದೂರು ದಾಖಲಿಸಿಕೊಳ್ಳುವ ಸಾಧ್ಯತೆಯು ಇರಲಿಲ್ಲವೆ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತನಿಖೆಗೆ ಜಿಲ್ಲೆಯ ಹೊರಗಿನ ಹಿರಿಯ, ಪ್ರಾಮಾಣಿಕ, ವಿಶ್ವಾಸಾರ್ಹ, ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನೇಮಿಸಬೇಕು. ಹಾಗೆಯೆ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಇಲಾಖೆ ನಡೆಸಿರುವ ಪ್ರಯತ್ನಗಳನ್ನು ಬಯಲಿಗೆಳೆಯಲು ಪ್ರತ್ಯೇಕ ತನಿಖೆ ನಡೆಸಬೇಕು. ಅಲ್ಲದೇ, ಗಂಭೀರ ಕರ್ತವ್ಯ ಲೋಪ ಎಸಗಿರುವ ವಾಮಂಜೂರು ಠಾಣಾಧಿಕಾರಿ ಶಿವಪ್ರಸಾದ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರನ್ನು ಅಮಾನತುಗಳಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0