ಸುವರ್ಣಸೌಧದ ಮುಂದೆ ಜಗತ್ತಿನ 2ನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜ ಅನಾವರಣ…!
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿದರು. ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ದೇಶ ಪ್ರೇಮದ ಸಂಕೇತ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಈ ಬಾರಿಯ ಅಧಿವೇಶನಕ್ಕೆ ಮೆರಗು ನೀಡಲಾಯಿತು. ಕಲಬುರಗಿಯ ಕಮಲಾಪುರದ ನಿವಾಸಿ ವಿನೋದ್ ಕುಮಾರ್ ರೇವಪ್ಪ ಮತ್ತು ಕುಟುಂಬ ಈ 2ನೇ ಅತೀ ದೊಡ್ಡ ಖಾದಿ ಧ್ವಜವನ್ನು ತಯಾರಿಸಿದ್ದಾರೆ.
ಧ್ವಜ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ರಾಷ್ಟ್ರಧ್ವಜ ಕೇವಲ ಖಾದಿ ವಸ್ತ್ರವಲ್ಲ. ಇದು ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಆದ್ದರಿಂದ ಪ್ರತಿಯೊಬ್ಬರೂ ರಾಷ್ಟ್ರ ಧ್ವಜವನ್ನು ಗೌರವಿಸಬೇಕು. ಮತ್ತು ಆಮೂಲಕ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ನಮ್ಮ ರಾಷ್ಟ್ರಧ್ವಜವು ತ್ಯಾಗ ಬಲಿದಾನ, ಸಮೃದ್ಧಿ, ಶಾಂತಿ ಮತ್ತು ಪ್ರಗತಿಯ ಸಂಕೇತ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿಕೊಳ್ಳಬೇಕು. ನಮ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ದೇಶ ಪ್ರೇಮ ಹುಟ್ಟು ಹಾಕುವ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮಗಳು ಇದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು. ಯಾರು ಯಾರನ್ನೂ ದ್ವೇಷಿಸಬಾರದು. ಶಾಂತಿ ಸಮಾಜ ನಿರ್ಮಾಣವಾದಾಗ ಮಾತ್ರ ಜಾತ್ಯಾತೀತ ದೇಶ ನಿರ್ಮಾಣ ಕಟ್ಟಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸಭಾಪತಿ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ, ಹೆಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

What's Your Reaction?
Like
0
Dislike
0
Love
0
Funny
0
Angry
0
Sad
0
Wow
0