ಮಂಗಳೂರು: ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ: ಪೊಲೀಸ್ ಕಾನ್‌ಸ್ಟೇಬಲ್ ಬಂಧನ

Jul 16, 2025 - 18:02
ಮಂಗಳೂರು: ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ: ಪೊಲೀಸ್ ಕಾನ್‌ಸ್ಟೇಬಲ್ ಬಂಧನ

ಮಂಗಳೂರು: ತನ್ನ ಪತಿಯಿಂದ ಲೈಂಗಿಕ ದೌರ್ಜನ್ಯ ಕ್ಕೆ ಒಳಗಾಗಿ ದೂರು ದಾಖಲಿಸಲು ಬಂದ ಮಹಿಳೆನ್ನು ಪೊಲೀಸ್ ಕಾನ್‌ಸ್ಟೇಬಲ್ ಅತ್ಯಾಚಾರ ನಡೆಸಿದ್ದು, ಇದೀಗ ಕಾನ್‌ಸ್ಟೇಬಲ್‌ನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ತ ಮಹಿಳೆಯು ತನ್ನ ಪತಿಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ದೂರು ನೀಡಿದ್ದರು.

ಜುಲೈ 15ರಂದು ಕಂಕನಾಡಿ ನಗರ ಠಾಣೆಗೆ ಆಗಮಿಸಿದ ಸಂತ್ರಸ್ತ ಮಹಿಳೆಯು ಲಿಖಿತ ದೂರು ನೀಡಿದ್ದಾರೆ. ತನ್ನ ಪತಿಯು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಮತ್ತೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಮಾಡಿದ್ದಾನೆ. ಅಲ್ಲದೆ, ಈ ಕೃತ್ಯದ ವೀಡಿಯೊ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವುದಾಗಿ ಬೆದರಿಸಿ, ಇತರೆ ವ್ಯಕ್ತಿಗಳೊಂದಿಗೂ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಸಂತ್ರಸ್ತ ಮಹಿಳೆಯು ತನಗೆ ಪರಿಚಯವಿದ್ದ ಕಾವೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಚಂದ್ರನಾಯ್ಕ್‌ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಚಂದ್ರನಾಯ್ಕ್ ಅವರು ಸಂತ್ರಸ್ತೆಯ ಮನೆಗೆ ತೆರಳಿ, ಪತಿಯ ಮೊಬೈಲ್‌ನಲ್ಲಿದ್ದ ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ, ನಂತರ ಸಂತ್ರಸ್ತೆಯ ಪತಿಯ ದುಷ್ಪ್ರೇರಣೆಯಿಂದ ಚಂದ್ರನಾಯ್ಕ್ ಅವರು ಸಂತ್ರಸ್ತ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆಯ ದೂರಿನ ಅನ್ವಯ, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಂತ್ರಸ್ತ ಮಹಿಳೆಯ ಪತಿ ಹಾಗೂ ಕಾವೂರು ಠಾಣಾ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರನಾಯ್ಕ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0