12 ದಿನಗಳ ಬಳಿಕ ಕದನ ವಿರಾಮಕ್ಕೆ ಒಪ್ಪಿಕೊಂಡ ಇಸ್ರೇಲ್ - ಇರಾನ್

Jun 24, 2025 - 12:35
12 ದಿನಗಳ ಬಳಿಕ ಕದನ ವಿರಾಮಕ್ಕೆ ಒಪ್ಪಿಕೊಂಡ ಇಸ್ರೇಲ್ - ಇರಾನ್

ಟೆಹರಾನ್ : ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ನೀಡಿದ್ದಾರೆ. ಇರಾನ್ ಟಿವಿ ಕೂಡ ಕದನ ವಿರಾಮ ಆರಂಭವಾಗಿದೆ ಎಂದು ವರದಿ ಮಾಡಿದೆ.

ಸೋಮವಾರ ರಾತ್ರಿ ಖತರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ನಡೆಸಿತ್ತು.

ಮಧ್ಯಪ್ರಾಚ್ಯದಲ್ಲಿನ 12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಇರಾನ್ ಮಂಗಳವಾರ ಒಪ್ಪಿಕೊಂಡಿವೆ ಎಂದು PTI ವರದಿ ಮಾಡಿದೆ. 

ಇಸ್ರೇಲ್‌ನ ಆಕ್ರಮಣಕ್ಕೆ ತಕ್ಕ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ ಅಂದರೆ, ಬೆಳಗ್ಗೆ 4 ಗಂಟೆಯವರೆಗೂ ಮುಂದುವರೆದವು. ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೂ ರಕ್ಷಿಸಲು ಸಿದ್ಧರಾಗಿರುವ ಮತ್ತು ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಎಲ್ಲ ಇರಾನಿಯನ್ನರೊಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಅರಘ್ಚಿ, ಇರಾನ್ ಪದೇ ಪದೆ ಸ್ಪಷ್ಟಪಡಿಸಿದಂತೆ, ಇಸ್ರೇಲ್ ಮೊದಲು ಇರಾನ್ ಮೇಲೆ ಯುದ್ಧ ಆರಂಭಿಸಿತು. ಸದ್ಯಕ್ಕೆ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಯಾವುದೇ ‘ಒಪ್ಪಂದ’ ಇಲ್ಲ. ಆದಾಗ್ಯೂ, ಇಸ್ರೇಲ್ ಆಡಳಿತವು ಇರಾನ್ ಜನರ ವಿರುದ್ಧ ತನ್ನ ಕಾನೂನುಬಾಹಿರ ಆಕ್ರಮಣವನ್ನು ಟೆಹರಾನ್​ನ ಸಮಯ ಬೆಳಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ನಂತರ ನಮ್ಮ ಪ್ರತಿದಾಳಿಯನ್ನು ಮುಂದುವರಿಸುವ ಉದ್ದೇಶ ನಮಗಿಲ್ಲ ಎಂದು ಹೇಳಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ತಮ್ಮ ಸೇನೆಗೆ ಧನ್ಯವಾದ ಸಲ್ಲಿಸುವ ಮೂಲಕ ಕದನ ವಿರಾಮದ ಸುಳಿವು ನೀಡಿದ್ದಾರೆ. ಈ ಮೂಲಕ 12 ದಿನಗಳ ಯುದ್ಧಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0