ದ.ಕ ಜಿಲ್ಲೆಯಲ್ಲಿ ಮುಂದುವರಿದ ಕೊಲೆ ಸರಣಿ ರಾಜ್ಯ ಗೃಹ ಇಲಾಖೆಯ ಕಟ್ಟುನಿಟ್ಟಿನ ಕ್ರಮಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ

May 27, 2025 - 21:49
ದ.ಕ ಜಿಲ್ಲೆಯಲ್ಲಿ ಮುಂದುವರಿದ ಕೊಲೆ ಸರಣಿ ರಾಜ್ಯ ಗೃಹ ಇಲಾಖೆಯ ಕಟ್ಟುನಿಟ್ಟಿನ ಕ್ರಮಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ

ರೌಡಿಶೀಟರ್ ಸುಹಾಸ್‌ ಹತ್ಯೆಯ ಬಳಿಕ ದ.ಕ ಜಿಲ್ಲೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಹಲವು ಕಡೆ ಮುಸ್ಲಿಮರ ಹತ್ಯೆಯತ್ನ ನಡೆಲಾಗಿದೆ. ಅದರ ಮುಂದುವರಿದ ಭಾಗವಾಗಿ ಇಂದು ದಿನಾಂಕ 27.5.25 ರಂದು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕೊಳತ್ತಮಜಲು ಪ್ರದೇಶದ ಅಮಾಯಕ ಅಬ್ದುಲ್ ರಹೀಂ  ಎಂಬವರನ್ನು ಮಾರಕಾಸ್ತದಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಜೊತೆಯಲ್ಲಿದ್ದ ಶಾಫಿ ಎಂಬವರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಮುವಾದಿ ಸಂಘಟನೆಗಳ ನಾಯಕರು ನಿರಂತರವಾಗಿ ಪ್ರಚೋಧನಾಕಾರಿ ಹೇಳಿಕೆ ನೀಡುತ್ತಿದ್ದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮುಸ್ಲಿಂ ಯುವಕನೊಬ್ಬನ ಹತ್ಯೆಯಾಗಿದೆ. ಇಂತಹದೊಂದು ಹತ್ಯೆಯ ಬಗ್ಗೆ, ಪ್ರತಿಕಾರದ ಬಗ್ಗೆ ಕೆಲವು ಸಂಘಟನೆಗಳ ನಾಯಕರು ದ್ವೇಷ ಭಾಷಣ ಮಾತಾಡುತ್ತಿದ್ದರೂ ಪೋಲೀಸ್ ಇಲಾಖೆ ಕಠಿನ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಒಬ್ಬ ಅಮಾಯಕ ಜೀವ ಕಳೆದುಕೊಳ್ಳಬೇಕಾಗಿ ಬಂತು. ಎರಡು ದಿನ ಹಿಂದಷ್ಟೇ 'ಬಟ್ಟೆ ಚಲೋ' ಕಾರ್ಯಕ್ರಮದ ಮೂಲಕ ಮುಸ್ಲಿಮರ ಮೇಲೆ ಪ್ರತಿಕಾರದ ಹತ್ಯೆಗೆ ಪ್ರಚೋಧನಾಕಾರಿ ಭಾಷಣ ಮಾಡಲಾಗಿತ್ತು. ಅಮಾಯಕರ ಹತ್ಯೆ ನಡೆಸುವ ಮೂಲಕ ದುಷ್ಕರ್ಮಿಗಳು ಧರ್ಮಸೇವೆ ಮಾಡ ಹೊರಟಿರುವುದು ಅತ್ಯಂತ ನಾಚಿಕೆಗೇಡು ಮತ್ತು ಮನುಷ್ಯ ಸಮಾಜಕ್ಕೆ ಕಳಂಕ. ಸರಕಾರ ಇನ್ನಾದರು ಎಚ್ಚೆತ್ತು ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಿ ಕೂಡಲೇ ದ.ಕ ಜಿಲ್ಲೆಯಾಧ್ಯಂತ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ ವೆಸ್ಟ್ ಸಮಿತಿ ಆಗ್ರಹಿಸಿದೆ. ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರನ್ನು, ಪ್ರಚೋದನೆ ನೀಡಿದವರನ್ನು ಕೂಡಲೇ ಪತ್ತೆ ಹಚ್ಚಿ ಗಂಭೀರ ಪ್ರಕರಣಗಳನ್ನು ದಾಖಲಿಸಿ ಕಠಿನ ಕಾನೂನು ಕ್ರಮ ಜರಗಿಸಬೇಕು, ಹತ್ಯೆಯಾದ ಅಬ್ದುಲ್ ರಹೀಂ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ, ಹಲ್ಲೆಗೊಳಗಾದ ಶಾಫಿ ರವರ ಆಸ್ಪತ್ರೆಯ ವೆಚ್ಚವನ್ನು ಸರಕಾರ ಭರಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಹನೀಫ್ ಹಾಜಿ ಬಜ್ಪೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲೆ ವೆಸ್ಟ್ ವತಿಯಿಂದ ರಾಜ್ಯ ಗೃಹ ಸಚಿವರು, ರಾಜ್ಯ ಪೋಲೀಸ್ ಮಹಾನಿರೀಕ್ಷಕರು, ದ.ಕ ಜಿಲ್ಲಾಧಿಕಾರಿ, ದ.ಕ.ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0