ಬೆಂಗಳೂರು ಮಳೆ; ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಬೆಂಗಳೂರು : ಭಾರೀ ಮಳೆಯಿಂದಾಗಿ ನಗರದಲ್ಲಿ ಸೃಷ್ಟಿಯಾಗಿರುವ ಅನಾಹುತಕ್ಕೆ ಸಿಲುಕಿರುವ ಜನರ ನೆರವಿಗೆ ಕೂಡಲೆ ಧಾವಿಸಬೇಕು, ಜನರ ಸಮಸ್ಯೆಯನ್ನು ನೀಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ವ್ಯಾಪಕ ತೊಂದರೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಳೆಯಿಂದಾಗಿರುವ ಅನಾಹುತಗಳ ಮಾಹಿತಿ ಪಡೆದರು.
ಈ ವೇಳೆ ಪ್ರವಾಹ ಸೃಷ್ಟಿಯಾಗಿರುವ ಬಡಾವಣೆಗಳಲ್ಲಿ ನೀರು ಹೊರಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಸೂಕ್ತ ಚರಂಡಿ, ರಾಜಕಾಲುವೆ ಹೂಳು ತೆಗೆಯಲು ಸೂಚಿಸಿದರು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಮುಂಗಾರು ಆರಂಭಕ್ಕೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಹೂಳು ತುಂಬಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತಾದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರವಾಹ ಸೃಷ್ಟಿಯಾಗಿದೆ. ಅದಕ್ಕಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ನಗರದಲ್ಲಿನ 859.90 ಕಿಮೀ ಉದ್ದದ ರಾಜಕಾಲುವೆ ಪೈಕಿ 491 ಕಿಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಕಿಮೀ ಉದ್ದದ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಚಾಲ್ತಿಯಲಿದ್ದು, ಉಳಿದ 173 ಕಿಮೀ ಉದ್ದದ ರಾಜಕಾಲುವೆ ದುರಸ್ತಿಗೆ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯಲಾಗುತ್ತಿದೆ ಎಂದರು.
ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅದರಲ್ಲಿ 166 ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಅವುಗಳು ಪೂರ್ಣಗೊಂಡರೆ ಪ್ರವಾಹ ಸಮಸ್ಯೆ ಕಡಿಮೆಯಾಗಲಿದೆ. ನಗರದಲ್ಲಿ 4,292 ಕಡೆ ರಾಜಕಾಲುವೆ ಒತ್ತುವರಿಯಾಗಿದ್ದು, 2,326 ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಷ್ಟೇ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅದನ್ನು ಪರಿಗಣಿಸದೆ ತೆರವುಗೊಳಿಸುವಂತೆ ನಿರ್ದೇಶಿಸಿದ್ದೇನೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಗರದಲ್ಲಿ ಬಿಬಿಎಂಪಿ ಗುರುತಿಸಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಸಂಚಾರ ಪೊಲೀಸರು ಮಳೆ ಬಂದಾಗ ಸಮಸ್ಯೆ ಉಂಟಾಗುವ 132 ಪ್ರದೇಶಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಏಪ್ರಿಲ್ ವೇಳೆಗೆ 82 ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಕಡೆ ಶೀಘ್ರದಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರಾಜಕಾಲುವೆಗಳ ಅಭಿವೃದ್ಧಿಗಾಗಿಯೇ ಎರಡು ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



