ಮತದಾರರ ಪಟ್ಟಿಗೆ ಸೇರ್ಪಡೆ ವಿವಾದ ರಾಜಕೀಯ ಪ್ರೇರಿತ: ಸೋನಿಯಾ ಗಾಂಧಿ

Feb 8, 2026 - 14:18
ಮತದಾರರ ಪಟ್ಟಿಗೆ ಸೇರ್ಪಡೆ ವಿವಾದ ರಾಜಕೀಯ ಪ್ರೇರಿತ: ಸೋನಿಯಾ ಗಾಂಧಿ

ಹೊಸದಿಲ್ಲಿ: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ, 1980ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ರಾಜಕೀಯ ಪ್ರೇರಿತ ಹಾಗೂ ಕ್ಷುಲ್ಲಕ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ.

ವಿಶೇಷ ನ್ಯಾಯಾಧೀಶ ವಿಶಾಲ್ ಗೋಂಗೆ ಅವರ ಸಮ್ಮುಖದಲ್ಲಿ ರೋಸ್ ಅವೆನ್ಯೂ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಇಟಲಿ ಮೂಲದ ಸೋನಿಯಾ ಗಾಂಧಿಯವರ ಹೆಸರನ್ನು ನಕಲಿ ದಾಖಲೆಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ಇದು ಸಂಪೂರ್ಣ ತಪ್ಪುಕಲ್ಪನೆ ಹಾಗೂ ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ನಡೆಸಿರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ 2025ರ ಡಿಸೆಂಬರ್ 9ರಂದು ಸೋನಿಯಾ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ನ್ಯಾಯಾಧೀಶ ಗೋಂಗೆ ಅವರು ಶನಿವಾರ ಉತ್ತರವನ್ನು ಪರಿಶೀಲಿಸಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ನಿಗದಿಪಡಿಸಿದ್ದಾರೆ.

ಪೌರತ್ವ ಸಂಬಂಧಿತ ವಿಷಯಗಳು ನೇರವಾಗಿ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಾಗಿ ವಿಚಾರಣಾ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣಾ ವ್ಯಾಜ್ಯಗಳ ಇತ್ಯರ್ಥದ ಅಧಿಕಾರ ಭಾರತದ ಚುನಾವಣಾ ಆಯೋಗಕ್ಕೆ ಸೇರಿದೆ ಎಂದು ಸೋನಿಯಾ ಗಾಂಧಿ ವಾದಿಸಿದ್ದಾರೆ. ಆದ್ದರಿಂದ ಐಪಿಸಿ ಅಥವಾ ಬಿಎನ್‌ಎಸ್ ಅಪರಾಧಗಳ ವ್ಯಾಪ್ತಿಯಲ್ಲಿ ಇಂತಹ ಖಾಸಗಿ ದೂರುಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂವಿಧಾನದ 329ನೇ ವಿಧಿಯ ಪ್ರಕಾರ ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತಕ್ಕೆ ಇದು ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0