ನಗರದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ: ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ

Mar 9, 2025 - 11:31
ನಗರದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ: ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ

ತುಮಕೂರು: ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ 2022 ಜುಲೈ 1ರಿಂದ ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.

ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ, ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ವಯ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿ, ಅಂಗಡಿ ಮಾಲೀಕರು, ಇ–ಕಾಮರ್ಸ್ ಕಂಪನಿ, ಬೀದಿ ವ್ಯಾಪಾರಿ, ವಾಣಿಜ್ಯ ಸಂಸ್ಥೆ(ಮಾಲ್, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರ) ಸಿನಿಮಾ ಮನೆ, ಪ್ರವಾಸೋದ್ಯಮ ಸ್ಥಳ, ಶಾಲೆ/ಕಾಲೇಜು, ಕಚೇರಿ ಸಂಕೀರ್ಣ/ಆಸ್ಪತ್ರೆ, ಇತರೆ ಸಂಸ್ಥೆಗಳು ಹಾಗೂ ಸಾರ್ವಜನಿಕರು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ/ ಮಾರಾಟ/ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

ಈ ಹಿಂದೆ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರೂ ಹಲವು ಹೊಟೇಲ್ ಹಾಗೂ ರಸ್ತೆ ಬದಿ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಹಾಳೆಗಳನ್ನು ಇಡ್ಲಿ ತಯಾರಿಸಲು/ಆಹಾರ ವಿತರಿಸುವ ಪ್ಲೇಟ್ ಮೇಲೆ/ಸಾಂಬರ್/ಚಟ್ನಿ-ಸಾಗು ಪಾರ್ಸಲ್ ನೀಡಲು/ ಕಾಫಿ/ಟೀ/ಜ್ಯೂಸ್ ಪಾರ್ಸಲ್ ನೀಡಲು ಸಿಲ್ವರ್ ಕೋಟೆಡ್ ಪ್ಲಾಸ್ಟಿಕ್ ಕವರ್ ಹಾಗೂ ಥರ್ಮೋಕೋಲ್ ಬಟ್ಟಲು/ಪ್ಲೇಟ್, ಸಿಲ್ವರ್ ಕೋಟೆಡ್ ಶೀಟ್ಸ್ ಹೊಂದಿರುವ ಜೊನ್ನೆ, ಪೇಪರ್ ಪ್ಲೇಟ್, ಬಟ್ಟಲು, ತಟ್ಟೆ, ಇತ್ಯಾದಿಗಳನ್ನು ಬಳಸುತ್ತಿರುವುದು ಕಂಡು ಬಂದಿದೆ.

ಅಲ್ಲದೆ, ಪ್ಲಾಸ್ಟಿಕ್ ಸ್ಟಿಕ್‌ ಗಳೊಂದಿಗೆ ಹಿಯರ್ ಬಡ್ಸ್, ಬಲೂನ್‌ ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಐಸ್‌ ಕ್ರೀಂ ಸ್ಟಿಕ್, ಅಲಂಕಾರಿಕ್ಕಾಗಿ ಬಳಸುವ ಪಾಲಿಸ್ಪರಿನ್(ಥರ್ಮೋಕೋಲ್), ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್/ಲೋಟ/ಫೋರ್ಕ್/ಚಮಚ/ಚಾಕು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿ, ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಪ್ಲಾಸ್ಟಿಕ್ ಫಿಲ್ಮ್, ಆಮಂತ್ರಣ ಪತ್ರ ಹಾಗೂ ಸಿಗರೇಟ್ ಪ್ಯಾಕೇಟ್‌ ಗಳು, 100 ಮೈಕ್ರಾನ್‌ ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ ಗಳನ್ನು ಸಹ ನಿಷೇಧಿಸಲಾಗಿದೆ.

ನಿಯಮ ಉಲ್ಲಂಘಿಸಿ ನಿಷೇಧಿತ ವಸ್ತುಗಳನ್ನು ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ/ ಮಾರಾಟ/ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಿ ಉದ್ದಿಮೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0