ನಕಲಿ ದಾಖಲೆ ಸೃಷ್ಟಿಸಿದ ಆರೋಪ : ವಿಟ್ಲ ಠಾಣಾ ಕಾನ್ಸ್ ಟೇಬಲ್ ಸಹಿತ ಇಬ್ಬರ ಬಂಧನ
ವಿಟ್ಲ: ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಲು ಯತ್ನಿಸಿದ್ದ ಆರೋಪಿ ಹಾಗೂ ಆತನಿಗೆ ಸಹಕರಿಸಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಠಾಣೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಪಾಸ್ ಪೋರ್ಟ್ ಪಡೆಯಲು ಯತ್ನಿಸಿದ ಆರೋಪಿ ಪಶ್ಚಿಮ ಬಂಗಾಳದ ನಿವಾಸಿ ಶಕ್ತಿದಾಸ್ ಹಾಗೂ ಆತನಿಗೆ ಸಹಕರಿಸಿದ ವಿಟ್ಲ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಪ್ರದೀಪ್ ಬಂಧಿತ ಆರೋಪಿಗಳಾಗಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಪಶ್ಚಿಮ ಬಂಗಾಳದ ಶಕ್ತಿದಾಸ್ ಎಂಬ ವ್ಯಕ್ತಿ 2025ನೇ ಫೆಬ್ರವರಿ ತಿಂಗಳಲ್ಲಿ ಪಾಸ್ ಪೊರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ಪೊಲೀಸ್ ವೆರಿಫಿಕೇಶನ್ ಮಾಡುವ ವೇಳೆ ಅರ್ಜಿದಾರರ ವಿಳಾಸವು ದಾಖಲಾತಿಗಳಲ್ಲಿನ ವಿಳಾಸಕ್ಕೆ ತಾಳೆಯಾಗದಿರುವುದರಿಂದ ನಾ-ಶಿಫಾರಸ್ಸು ಮಾಡಲಾಗಿತ್ತು. ಬಳಿಕ ಆ ವ್ಯಕ್ತಿಯು 2025ನೇ ಜೂನ್ ತಿಂಗಳಲ್ಲಿ ಮರು ಅರ್ಜಿಯನ್ನು ಸಲ್ಲಿಸಿದ್ದರು. ಈ ವೇಳ ಮರುಅರ್ಜಿಯನ್ನು ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ರವರು ಅರ್ಜಿದಾರರ ವಿಳಾಸವಿರುವ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಅರಿವಿಗೆ ಬಾರದಂತೆ, ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಹೆಸರಿನಲ್ಲಿ ವರದಿ ತಯಾರಿಸಿ, ಬೀಟ್ ಸಿಬ್ಬಂದಿಯ ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಯವರಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಆ ಬಳಿಕ ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದೆಂದು ನಾಶಪಡಿಸಿದ್ದರು. ಡಿ.25 ರಂದು ದಾಖಲೆಯನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರಕಾರದಿಂದ ನೀಡಲ್ಪಡುವ ಅತೀ ಪ್ರಮುಖ ಗುರುತಿನ ಚೀಟಿ ಪಾಸ್ ಪೋರ್ಟ್ ಅನ್ನು, ಅಪರಾಧಿಕ ನಂಬಿಕೆ ದ್ರೋಹ ಬಗೆದು ಶಕ್ತಿದಾಸ್ ಎಂಬವರಿಗೆ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಿ ಕಡತವನ್ನು ನಾಶಪಡಿಸಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೊರ್ಟ ಪಡೆದ ಶಕ್ತಿದಾಸ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 193/2025, ಕಲಂ: 336, 337, 316(5), 238 ಐಪಿಸಿ 2023 ರಂತೆ ಪ್ರಕರಣ (ಅ.ಕ್ರ. 193/2025) ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಕಾನ್ಸ್ ಟೇಬಲ್ ಪ್ರದೀಪ್ ಹಾಗೂ ಪಶ್ಚಿಮ ಬಂಗಾಳ ಮೂಲದ ಸ್ಕಂದದಾಸ್ ರವರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಪ್ರದೀಪ್ ರವರನ್ನು ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಕ್ತಿದಾಸ್ ಪೊಲೀಸ್ ವಶದಲ್ಲಿದ್ದು, ವಿಚಾರಣೆಯ ವೇಳೆ ಆತ ತಾನು ಪಶ್ಚಿಮ ಬಂಗಾಳ ನಿವಾಸಿಯೆಂದು ತಿಳಿಸಿರುತ್ತಾನೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕಾನ್‌ಸ್ಟೇಬಲ್ ಅಮಾನತು:
ಆರೋಪಿತ ಪ್ರದೀಪ್‌ರನ್ನು ಡಿ.22ರಿಂದ ಇಲಾಖಾ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಆರೋಪಿ ಶಕ್ತಿದಾಸ್‌ನ ಆಧಾರ್ ಕಾರ್ಡ್‌ನಲ್ಲಿ ಪಶ್ಚಿಮ ಬಂಗಾಳದ ವಿಳಾಸವಿದೆ.ವಿಟ್ಲ ಪೊಲೀಸ್ ಠಾಣೆಯಿಂದ ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಲು ಪಶ್ಚಿಮ ಬಂಗಾಳದಲ್ಲಿರುವ ಆತನ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಅವರು ಠಾಣೆಗೆ ಬರುವ ಸಲುವಾಗಿ ಪಶ್ಚಿಮ ಬಂಗಾಳದಿಂದ ಬರುತ್ತಿದ್ದಾರೆ.ಪ್ರಸ್ತುತ ತನಿಖಾ ಹಂತದಲ್ಲಿ ಆರೋಪಿತನು ಬಾಂಗ್ಲಾದೇಶದ ನಾಗರಿಕನೆಂದು ಯಾವುದೇ ಮಾಹಿತಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



