ಎಸ್‌ಎಸ್‌ಎಫ್ ರಾಷ್ಟ್ರೀಯ ಸಾಹಿತ್ಯೋತ್ಸವ ನವೆಂಬರ್‌ 14 ರಿಂದ ಗುಲ್ಬರ್ಗದಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮುಡ್ನಾಕೂಡು ಚಿನ್ನಸ್ವಾಮಿ ಉದ್ಘಾಟನೆಗಯ್ಯಲಿದ್ದಾರೆ

Nov 5, 2025 - 15:54
ಎಸ್‌ಎಸ್‌ಎಫ್ ರಾಷ್ಟ್ರೀಯ ಸಾಹಿತ್ಯೋತ್ಸವ ನವೆಂಬರ್‌ 14 ರಿಂದ ಗುಲ್ಬರ್ಗದಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮುಡ್ನಾಕೂಡು ಚಿನ್ನಸ್ವಾಮಿ ಉದ್ಘಾಟನೆಗಯ್ಯಲಿದ್ದಾರೆ

ನವದೆಹಲಿ | ಈ ವರ್ಷದ ಎಸ್‌ಎಸ್‌ಎಫ್ (ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್) ರಾಷ್ಟ್ರೀಯ ಸಾಹಿತ್ಯೋತ್ಸವವು ನವೆಂಬರ್‌ 14, 15 ಮತ್ತು 16 ರಂದು ಕರ್ನಾಟಕದ ಗುಲ್ಬರ್ಗದಲ್ಲಿ ಅದ್ದೂರಿಯಾಗಿ ನಡೆಯಲಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಸ್‌ಎಫ್ ರಾಷ್ಟ್ರೀಯ ನಾಯಕರು ಈ ಮಾಹಿತಿಯನ್ನು ಪ್ರಕಟಿಸಿದರು. ಸಾಹಿತ್ಯೋತ್ಸವವನ್ನು ಕನ್ನಡದ ಖ್ಯಾತ ಕವಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುಡ್ನಾಕೂಡು ಚಿನ್ನಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ ಕರ್ನಾಟಕ ಸಚಿವ ಬಿ.ಝಡ್. ಸಮೀರ್ ಅಹಮದ್ ಖಾನ್, ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ, ಇನಾಮದಾರ ಯುನಾನಿ ವೈದ್ಯಕೀಯ ಕಾಲೇಜು ಅಧ್ಯಕ್ಷ ಡಾ. ಕಮರುಝಾಮ ಹುಸೇನ್ ಇನಾಮದಾರ್, ಡಾ. ಮುಹಮ್ಮದ್ ಫಾರೂಕ್ ನಈಮಿ, ಸಿ.ಪಿ. ಉಬೈದುಲ್ಲಾ ಸಖಾಫಿ ಮತ್ತು ದಿಲ್ಶಾದ್ ಅಹ್ಮದ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಈ ಬಾರಿ ನಡೆಯಲಿರುವ ಸಾಹಿತ್ಯೋತ್ಸವದಲ್ಲಿ 26 ರಾಜ್ಯಗಳಿಂದ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಎಂಟು ವಿಭಿನ್ನ ವಿಭಾಗಗಳಲ್ಲಿ 130 ಸ್ಪರ್ಧೆಗಳು ನಡೆಯಲಿವೆ. ಯೂನಿಟ್ ಮಟ್ಟದಿಂದ ರಾಜ್ಯಮಟ್ಟದವರೆಗೆ ವಿವಿಧ ಹಂತಗಳಿಂದ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಸಾಹಿತ್ಯ ಕೌಶಲ್ಯ ಪ್ರದರ್ಶನ ಮಾಡಲಿದ್ದಾರೆ. ಸಾಹಿತ್ಯೋತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗಾಗಿ ಹೊಸ ಕಲಾ ಶಾಲೆಯ ಉದ್ಘಾಟನೆ ಕೂಡ ನಡೆಯಲಿದೆ. ಸಾಹಿತ್ಯ ಕ್ಷೇತ್ರವನ್ನು ಅನ್ವೇಷಿಸಲು ಬಯಸುವ ವಿದ್ಯಾರ್ಥಿಗಳಿಗೆ ಈ ಶಾಲೆ ಬರವಣಿಗೆ, ಪ್ರಸಂಗ, ಚಿತ್ರಕಲೆ ಮುಂತಾದ ವಿಭಾಗಗಳಲ್ಲಿ ತರಗತಿಗಳು ಮತ್ತು ಕಾರ್ಯಾಗಾರಗಳ ಮೂಲಕ ತರಬೇತಿ ನೀಡಲಿದೆ. 1,000 ಯುವ ಸಾಹಿತ್ಯ ಪ್ರತಿಭೆಗಳನ್ನು ರೂಪಿಸುವ ಗುರಿಯುಳ್ಳ ಈ ಕಲಾ ಶಾಲೆ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಎಸ್‌ಎಸ್‌ಎಫ್ ನಾಯಕರು ತಿಳಿಸಿದ್ದಾರೆ.
ಸಾಹಿತ್ಯೋತ್ಸವದ ಭಾಗವಾಗಿ ಬರಹಗಾರರ ಸಮ್ಮೇಳನ, ಖ್ವಾಜಾ ಬಂದೇ ನವಾಜ್ ಸಮ್ಮೇಳನ, ವೃತ್ತಿ ಪ್ರದರ್ಶನ, ಶಿಕ್ಷಣ ಸಮ್ಮೇಳನ, ಮತ್ತು ಗ್ರ್ಯಾಂಡ್ ರೂಹಾನಿ ಮಜ್ಲಿಸ್ ಎಂಬ ಆಧ್ಯಾತ್ಮಿಕ ಸಭೆಗಳನ್ನು ಸಹ ಆಯೋಜಿಸಲಾಗಿದೆ.
ನವೆಂಬರ್‌ 14 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಮಹಾ ಆಧ್ಯಾತ್ಮಿಕ ಮಜ್ಲಿಸ್ ಅನ್ನು ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್-ಬುಖಾರಿ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮುಖ್ಯ ಉಪನ್ಯಾಸ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಹಝ್ರತ್ ಸಯ್ಯಿದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಹಝ್ರತ್ ಅಬುಲ್ ಫತ್ತಾಹ್ ಸಯ್ಯದ್ ಶಾ ಹಸನ್ ಶಬ್ಬೀರ್ ಮುಹಮ್ಮದ್ ಹುಸೇನಿ, ಹಝ್ರತ್ ಡಾ. ಅಫ್ಸಲುದ್ದೀನ್ ಜುನೈದ್, ಹಝ್ರತ್ ಸೈಯದ್ ಯಾದುಲ್ಲಾ ಅಲ್ ಹುಸೇನಿ ನಿಜಾಮ್ ಬಾಬಾ ಸೇರಿದಂತೆ ಅನೇಕ ಧಾರ್ಮಿಕ ನಾಯಕರೂ ಹಾಜರಾಗಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಸ್‌ಎಫ್ ರಾಷ್ಟ್ರೀಯ ಅಧ್ಯಕ್ಷ ಸಿ.ಪಿ. ಉಬೈದುಲ್ಲಾ ಸಖಾಫಿ, ಪ್ರಧಾನ ಕಾರ್ಯದರ್ಶಿ ದಿಲ್ಶಾದ್ ಅಹ್ಮದ್, ಕಾರ್ಯದರ್ಶಿ ಶಾಫಿ ನೂರಾನಿ, ಹಾಗೂ ಕೇಂದ್ರ ಸಮಿತಿ ಸದಸ್ಯರಾದ ಖಮರ್ ಸಖಾಫಿ ಮತ್ತು ಖ್ವಾಜಾ ಸಫರ್ ಮದನಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0