ಸರ್ಕಾರಿ ಕಾರ್ಯಕ್ರಮಗಳಲ್ಲಿ ನಂದಿನಿ ಉತ್ಪನ್ನಗಳ ಬಳಕೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ ಸೂಚನೆ

Nov 1, 2025 - 11:39
ಸರ್ಕಾರಿ ಕಾರ್ಯಕ್ರಮಗಳಲ್ಲಿ ನಂದಿನಿ ಉತ್ಪನ್ನಗಳ ಬಳಕೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ ಸೂಚನೆ

ಕರ್ನಾಟಕದ ಹೆಮ್ಮೆ ಹಾಗೂ ಲಕ್ಷಾಂತರ ಗ್ರಾಹಕರ ನೆಚ್ಚಿನ "ನಂದಿನಿ" ಬ್ರ್ಯಾಂಡ್‌ ಉತ್ತೇಜನಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್‌ (ಕೆಎಂಎಫ್‌) ಹೊರತರುತ್ತಿರುವ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳು ಗುಣಮಟ್ಟ ಹಾಗೂ ರುಚಿಯಿಂದಲೂ ಪ್ರಸಿದ್ಧಿ ಪಡೆದಿವೆ.

ಹೀಗಾಗಿ ಇನ್ನು ಮುಂದೆ ಸರ್ಕಾರದ ಎಲ್ಲ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಕೆಎಂಎಫ್‌ನ ನಂದಿನಿ ತಿನಿಸುಗಳನ್ನು ಕಡ್ಡಾಯವಾಗಿ ಬಳಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರುಗಳ ಸಭೆಗಳಲ್ಲಿ, ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ನಂದಿನಿ ತಿನಿಸುಗಳನ್ನು ಕಡ್ಡಾಯವಾಗಿ ಬಳಸಲು ಸೂಚಿಸಿದ್ದಾರೆ. ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರ ಬಳಕೆ ಮಾಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಸಿಹಿ ಉತ್ಪನ್ನ ಮಾರಾಟದಲ್ಲಿ ನಂದಿನಿ ದಾಖಲೆ

ಕೆಎಂಎಫ್‌ನ ನಂದಿನಿಯ ಉತ್ಪನ್ನಗಳು ಇತ್ತೀಚೆಗೆ ಮಾರಾಟದಲ್ಲಿಯೂ ಹೊಸ ದಾಖಲೆ ಬರೆದಿವೆ. ಈ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಹೊಸ ದಾಖಲೆ ನಿರ್ಮಿಸಿದೆ. ಈ ದಾಖಲೆಯ ಮಾರಾಟಕ್ಕೆ ಹಾಲು ಉತ್ಪಾದಕರ ಶ್ರಮ ಹಾಗೂ ಗ್ರಾಹಕರ ನಂಬಿಕೆಯೇ ಕಾರಣ ಎಂದು ಕೆಎಂಎಫ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ನಂದಿನಿ ಬ್ರ್ಯಾಂಡ್‌ನಡಿಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳು ಮಾರಾಟವಾಗಿದ್ದು, ಒಟ್ಟಾರೆ 46 ಕೋಟಿಯ ದಾಖಲೆಯ ವಹಿವಾಟು ನಡೆಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ 38ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿಯು ಈ ಹಬ್ಬದ ಪ್ರಯುಕ್ತ ನಂದಿನಿ ಬ್ರ್ಯಾಂಡ್ ಮೂಲಕ ಸಕ್ಕರೆ ರಹಿತ ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಇವು ಮಧುಮೇಹ ಇರುವವರಿಗೆ ಅನುಕೂಲಕರವಾಗಿದ್ದು, ತೂಕ ನಿಯಂತ್ರಣಕ್ಕೆ ಸಹಕಾರಿ. ಸಕ್ಕರೆ ಇಲ್ಲದಿದ್ದರೂ ಸಹಜ ಸಿಹಿ ಮತ್ತು ರುಚಿ ಇರುವ ಈ ಉತ್ಪನ್ನಗಳು ಜನಪ್ರಿಯವಾಗುತ್ತಿದ್ದು ಗ್ರಾಹಕರ ಮನಗೆದ್ದಿವೆ ಎಂದು ಸಂಸ್ಥೆ ಹೇಳಿತ್ತು. ಸದ್ಯ ವಿಭಿನ್ನ ಹಾಗೂ ರುಚಿಕರವಾದ ನಂದಿನಿ ತಿಂಡಿ-ತಿನಿಸುಗಳು ಲಭ್ಯವಿದೆ. ಇನ್ನು ಮುಂದೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಸಲು ಸೂಚನೆ ನೀಡಿರುವುದರಿಂದ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0