'ಅತ್ಯಾಚಾರ,ಹಿಂಸೆ,ಭಯೋತ್ಪಾದನೆ': ಭಾರತಕ್ಕೆ ಒಂಟಿಯಾಗಿ ಪ್ರಯಾಣಿಸದಂತೆ ಮಹಿಳೆಯರಿಗೆ ಅಮೆರಿಕದ ಎಚ್ಚರಿಕೆ

Jun 22, 2025 - 18:01
Jun 22, 2025 - 17:32
'ಅತ್ಯಾಚಾರ,ಹಿಂಸೆ,ಭಯೋತ್ಪಾದನೆ': ಭಾರತಕ್ಕೆ ಒಂಟಿಯಾಗಿ ಪ್ರಯಾಣಿಸದಂತೆ ಮಹಿಳೆಯರಿಗೆ ಅಮೆರಿಕದ ಎಚ್ಚರಿಕೆ

ವಾಷಿಂಗ್ಟನ್ ಡಿಸಿ: ಅಮೆರಿಕದ ವಿದೇಶಾಂಗ ಸಚಿವಾಲಯವು ಭಾರತಕ್ಕಾಗಿ ತನ್ನ ಪ್ರಯಾಣ ಸೂಚಿಯನ್ನು ದಿಢೀರ್ ಪರಿಷ್ಕರಿಸಿದೆ. ಲೆವೆಲ್-2 ಪ್ರಯಾಣ ಎಚ್ಚರಿಕೆಯನ್ನು ಹೊರಡಿಸಿರುವ ಅದು ಹೆಚ್ಚಿನ ಜಾಗ್ರತೆಯನ್ನು ವಹಿಸುವಂತೆ ಪ್ರಯಾಣಿಕರನ್ನು ಆಗ್ರಹಿಸಿದೆ.

‘ಅಪರಾಧ ಮತ್ತು ಭಯೋತ್ಪಾದನೆ’ ಕಾರಣದಿಂದಾಗಿ ಜೂನ್ 16ರಂದು ಹೊರಡಿಸಿರುವ ಸಲಹಾಸೂಚಿಯಲ್ಲಿ ಅದು,ಕೆಲವು ಪ್ರದೇಶಗಳಲ್ಲಿ ಅಪಾಯವು ಹೆಚ್ಚಿದೆ ಎಂದು ಹೇಳಿದೆ.

ಅತ್ಯಾಚಾರವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲೊಂದಾಗಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ನಡೆಯುತ್ತಿವೆ, ಭಯೋತ್ಪಾದಕರು ಎಚ್ಚರಿಕೆಯನ್ನು ನೀಡಿ ಅಥವಾ ಎಚ್ಚರಿಕೆಯನ್ನೇ ನೀಡದೆ ದಾಳಿ ಮಾಡಬಹುದು. ಅವರು ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು/ಶಾಪಿಂಗ್ ಮಾಲ್‌ಗಳು,ಸರಕಾರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಸಲಹಾಸೂಚಿಯು, ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಪ್ರಜೆಗಳಿಗೆ ತುರ್ತು ಸೇವೆಗಳನ್ನು ಒದಗಿಸುವ ಅಮೆರಿಕದ ಸಾಮರ್ಥ್ಯವು ಸೀಮಿತವಾಗಿದೆ. ಈ ಪ್ರದೇಶಗಳು ಪೂರ್ವ ಮಹಾರಾಷ್ಟ್ರ ಮತ್ತು ಉತ್ತರ ತೆಲಂಗಾಣದಿಂದ ಪೂರ್ವ ಪಶ್ಚಿಮ ಬಂಗಾಳದವರೆಗೆ ಹರಡಿಕೊಂಡಿವೆ ಎಂದು ಹೇಳಿದೆ.

ಅಪಾಯಗಳ ಕಾರಣದಿಂದಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ಸರಕಾರದ ಉದ್ಯೋಗಿಗಳು ಈ ರಾಜ್ಯಗಳಿಗೆ ಪ್ರಯಾಣಿಸಲು ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.

ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ನಿರ್ದಿಷ್ಟಪಡಿಸಿರುವ ಸಲಹಾಸೂಚಿಯು, ಭಾರತದಲ್ಲಿ ಉಪಗ್ರಹ ಫೋನ್ ಅಥವಾ ಜಿಪಿಎಸ್ ಸಾಧನವನ್ನು ಹೊಂದಿರುವುದು ಕಾನೂನು ಬಾಹಿರವಾಗಿದೆ ಮತ್ತು ಅದಕ್ಕಾಗಿ 20,000 ಡಾಲರ್ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ವಿಶೇಷವಾಗಿ,ನೀವು ಮಹಿಳೆಯಾಗಿದ್ದರೆ ಒಂಟಿಯಾಗಿ ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0