ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ಸಚಿವ: ವಿವಾದ ಬೆನ್ನಲ್ಲೇ ಕ್ಷಮೆಯಾಚನೆ

May 14, 2025 - 12:31
ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ಸಚಿವ: ವಿವಾದ ಬೆನ್ನಲ್ಲೇ ಕ್ಷಮೆಯಾಚನೆ

ಭೋಪಾಲ್: ಪಾಕಿಸ್ತಾನದ ಉಗ್ರರ ವಿರುದ್ಧ ನಡೆದ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆಯ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಬಿಜೆಪಿ ಸಚಿವರೊಬ್ಬರು ನಾಲಿಗೆ ಹರಿಬಿಟ್ಟಿದ್ದು, ತನ್ನ ಹೇಳಿಕೆ ವಿವಾದ ಆಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದಾರೆ.

ಮಧ್ಯಪ್ರದೇಶದ ಸಂಪುಟ ಸಚಿವ ಕುನ್ವರ್ ವಿಜಯ್ ಶಾ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಮಂಗಳವಾರ ಕ್ಷಮೆ ಯಾಚಿಸಿದ್ದು, ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ವಿಜಯ್ ಶಾ, ‘‘ನಾನು ದೇವರಲ್ಲ, ನಾನು ಕೂಡ ಮನುಷ್ಯ. ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ನಾನು 10 ಬಾರಿ ಕ್ಷಮೆ ಯಾಚಿಸುತ್ತೇನೆ’’ ಎಂದಿದ್ದಾರೆ. ವಿಜಯ್ ಶಾ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ವಿವಾದ ಉಂಟಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿತ್ತು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಬುಡಕಟ್ಟು ಸಚಿವ ಕುನ್ವರ್‌ ವಿಜಯ್‌ ಶಾ, ‘ನಮ್ಮ ದೇಶದ ಪುತ್ರಿಯರ ಸಿಂಧೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ (ಕರ್ನಲ್ ಸೋಫಿಯಾ ಖುರೇಷಿ ) ಪ್ರಧಾನಿ ಮೋದಿಯವರು ಕಳಿಸಿದ್ದರು. ಆ ಮೂಲಕ ನಾವು ಭಯೋತ್ಪಾದಕ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ’ ಎಂದು ಹೇಳಿದ್ದರು.

‘ಅವರು (ಭಯೋತ್ಪಾದಕರು) ನಮ್ಮ ಹಿಂದೂ ಸಹೋದರರನ್ನು ಬಟ್ಟೆ ಬಿಚ್ಚುವಂತೆ ಮಾಡಿ ಕೊಂದರು. ಪ್ರಧಾನಿ ಮೋದಿ ಅವರು ತಮ್ಮ (ಭಯೋತ್ಪಾದಕರ) ಸಹೋದರಿಯನ್ನು ಸೇನಾ ವಿಮಾನದಲ್ಲಿ ಕಳುಹಿಸಿ ಅವರ ಮನೆಗಳ ಮೇಲೆ ದಾಳಿ ಮಾಡಿದರು. ಅವರು (ಭಯೋತ್ಪಾದಕರು) ನಮ್ಮ ಸಹೋದರಿಯರನ್ನು ವಿಧವೆಯನ್ನಾಗಿ ಮಾಡಿದರು, ಆದ್ದರಿಂದ ಮೋದಿಜಿ ಅವರ ಸಮುದಾಯದ ಸಹೋದರಿಯನ್ನು ಅವರ ಬಟ್ಟೆಗಳನ್ನು ತೆಗೆದು ಪಾಠ ಕಲಿಸಲು ಕಳುಹಿಸಿದರು’ ಎಂದು ಬಿಜೆಪಿ ನಾಯಕ ಇಂದೋರ್ ಬಳಿಯ ರಾಮಕುಂಡ ಗ್ರಾಮದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಹೇಳಿದ್ದರು.

ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಬುಡಕಟ್ಟು ಸಚಿವ ಕುನ್ವರ್‌ ವಿಜಯ್‌ ಶಾ ಮಾಡಿದ ಭಾಷಣವು ಭಾರೀ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್‌ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಟೀಕಿಸಿ, ‘ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವರೊಬ್ಬರು ನಮ್ಮ ಧೈರ್ಯಶಾಲಿ ಮಗಳು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅತ್ಯಂತ ಅವಮಾನಕರ, ನಾಚಿಕೆಗೇಡಿನ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ಪಹಲ್ಗಾಮ್‌ನ ಭಯೋತ್ಪಾದಕರು ದೇಶವನ್ನು ವಿಭಜಿಸಲು ಬಯಸಿದ್ದರು, ಆದರೆ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವಲ್ಲಿ ‘ಆಪರೇಷನ್ ಸಿಂಧೂರ್’ ಉದ್ದಕ್ಕೂ ದೇಶವು ಒಂದಾಗಿತ್ತು’ ಎಂದು X ನಲ್ಲಿ ಬರೆದಿದ್ದಾರೆ.

ಅಲ್ಲದೇ, ವಿಜಯ್ ಶಾ ಹೇಳಿಕೆ ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಹೇಳಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಕೂಡಲೇ ಆ ಸಚಿವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಬೇಕೆಂದು ಬಿಜೆಪಿ ಪಕ್ಷವನ್ನು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0