ಯಲಹಂಕ ಒಕ್ಕಲೆಬ್ಬಿಸುವಿಕೆ; ತುರ್ತು ಪರಿಹಾರ ಕಂಡುಕೊಳ್ಳಬೇಕು - ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕೋಝಿಕೋಡ್: ಬೆಂಗಳೂರಿನ ಬಂದೆ ರಸ್ತೆಯ ಫಕೀರ್ ಲೇ-ಔಟ್ ಮತ್ತು ವಸೀಮ್ ಲೇ-ಔಟ್ ಕಾಲೋನಿಗಳ ಸುಮಾರು ಇನ್ನೂರು ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ ಕ್ರಮವು ಆತಂಕ ಮತ್ತು ನೋವನ್ನು ಉಂಟುಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರು ಮತ್ತು ದಲಿತರು ಕಿಕ್ಕಿರಿದು ವಾಸಿಸುವ ಪ್ರದೇಶವನ್ನು ಈ ಕೊರೆಯುವ ಚಳಿಯಲ್ಲಿ ಒಕ್ಕಲೆಬ್ಬಿಸುವುದು ಮಾನವೀಯತೆಗೆ ಸಲ್ಲದು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ವಸತಿ ಸೌಕರ್ಯವನ್ನು ಖಚಿತಪಡಿಸಬೇಕಾದ ಜವಾಬ್ದಾರಿಯುತ ಸರ್ಕಾರವೇ ಅದನ್ನು ಕೆಡವುದು ಸಮರ್ಥನೀಯವಲ್ಲ. ಮಾನವೀಯ ಪರಿಗಣನೆ, ಅಗತ್ಯ ಕಾಲಾವಕಾಶ ನೀಡಿ ಹಾಗೂ ಸೂಕ್ತ ಪರಿಹಾರ ಮತ್ತು ಪುನರ್ವಸತಿಯನ್ನು ಖಚಿತಪಡಿಸಿದ ನಂತರವಷ್ಟೇ ಸರ್ಕಾರಿ ಸಂಸ್ಥೆಗಳು ಭೂಮಿ ವಶಪಡಿಸಿಕೊಳ್ಳುವಂತಹ ಕ್ರಮಗಳಿಗೆ ಮುಂದಾಗಬೇಕು. ನೆಲೆ, ಸಂಪಾದನೆ ಮತ್ತು ದಾಖಲೆಗಳನ್ನು ಕಳೆದುಕೊಂಡ ಬಡವರ ಪುನರ್ವಸತಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಗ್ರ್ಯಾಂಡ್ ಮುಫ್ತಿ ಹೇಳಿದರು.
ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಮತ್ತು ಇತರ ಸರ್ಕಾರಿ ಅಧಿಕಾರಿಗಳೊಂದಿಗೆ ಗ್ರ್ಯಾಂಡ್ ಮುಫ್ತಿ ಚರ್ಚೆ ನಡೆಸಿದ್ದಾರೆ. ಸೂಕ್ತ ಸ್ಥಳವನ್ನು ಗುರುತಿಸಿ ಎಲ್ಲರಿಗೂ ಸಮರ್ಪಕವಾದ ವಸತಿ ಸೌಕರ್ಯ ಒದಗಿಸಲು ಮತ್ತು ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರವೇ ಮುಂದಾಗಬೇಕೆಂದು ಅವರು ಒತ್ತಾಯಿಸಿದರು. ಚಳಿಯಲ್ಲಿ ಸೂರು ಇಲ್ಲದೆ ಅಲೆಯುತ್ತಿರುವ ಜನರಿಗೆ ಸಾಧ್ಯವಿರುವ ಎಲ್ಲಾ ತಾತ್ಕಾಲಿಕ ಸೌಲಭ್ಯಗಳನ್ನು ಒದಗಿಸಬೇಕೆಂಬ ಗ್ರ್ಯಾಂಡ್ ಮುಫ್ತಿಯವರ ಸೂಚನೆಯ ಮೇರೆಗೆ, ಬೆಂಗಳೂರಿನ ಎಸ್‌ವೈಎಸ್ ಸಾಂತ್ವನ (SYS Santhwanam) ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



