ಡಾ. ಹಕೀಮ್ ಅಝ್ಹರಿಯವರ ಆಂಧ್ರ–ಕರ್ನಾಟಕ ಪ್ರವಾಸ: ವಿವಿಧ ಶಿಕ್ಷಣ ಯೋಜನೆಗಳಿಗೆ ಚಾಲನೆ

Nov 13, 2025 - 12:28
ಡಾ. ಹಕೀಮ್ ಅಝ್ಹರಿಯವರ ಆಂಧ್ರ–ಕರ್ನಾಟಕ ಪ್ರವಾಸ: ವಿವಿಧ ಶಿಕ್ಷಣ ಯೋಜನೆಗಳಿಗೆ ಚಾಲನೆ

ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವೆಸ್ಟ್ ಫೌಂಡೇಶನ್‌ನ ಹೊಸ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಡಾ. ಅಝ್ಹರಿ ಉದ್ಘಾಟಿಸಿದರು.


ಗದಗ |
ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವೆಸ್ಟ್ ಫೌಂಡೇಶನ್ ವತಿಯಿಂದ ಹೊಸ ಶಿಕ್ಷಣ–ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ನೊಲೆಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್, ಜಾಮಿಅ ಮದೀನತ್ತುನೂರ್ ಡೈರೆಕ್ಟರ್ ಹಾಗೂ ಕ್ವೆಸ್ಟ್ ಫೌಂಡೇಶನ್‌ನ ಮುಖ್ಯ ನೇತಾರರಾದ ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಚಾಲನೆ ನೀಡಿದರು.

ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ನಡೆದ ಈ ಪ್ರವಾಸದ ವೇಳೆ, ಡಾ. ಹಕೀಮ್ ಅಝ್ಹರಿ ವಿವಿಧ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ಭೇಟಿಯಿಂದ ಆ ಪ್ರದೇಶಗಳ ಶಿಕ್ಷಣ–ಸಾಮಾಜಿಕ ಪುನರುತ್ಥಾನ ಪ್ರಯತ್ನಗಳಿಗೆ ಹೊಸ ಶಕ್ತಿ ದೊರಕಿತು.

ಆಂಧ್ರದ ಉರುವಕ್ಕೊಂಡ ಗ್ರಾಮದಲ್ಲಿ ಕ್ವೆಸ್ಟ್ ಫೌಂಡೇಶನ್‌ನ ನೇತೃತ್ವದಲ್ಲಿ ನಿರ್ಮಿತ ಗೌಸಿಯ ಮಸ್ಜಿದ್‌ಗೆ ಡಾ. ಅಝ್ಹರಿ ಉದ್ಘಾಟನೆ ನೆರವೇರಿಸಿ, ಅದನ್ನು ಜನತೆಗೆ ಸಮರ್ಪಿಸಿದರು. ಅಲ್ಲದೆ ಆಂಧ್ರದ ಗುಂಡಕ್ಕಲ್ ಪ್ರದೇಶದಲ್ಲಿನ ಕ್ವೆಸ್ಟ್ ಸಂಸ್ಥೆಗಳ ಕಾರ್ಯಗಳನ್ನು ಅವಲೋಕಿಸಿ, ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕರ್ನಾಟಕದ ಗದಗ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ತಿರಾಸ್ ಇಂಟಿಗ್ರೇಟೆಡ್ ಸ್ಟಡೀಸ್ ಎಂಬ ಸಮನ್ವಯ ಶಿಕ್ಷಣ ಕೇಂದ್ರ ಹಾಗೂ ನವೀಕರಿಸಿದ ಖುಬಾ ಮಸ್ಜಿದ್ ಸೇರಿದಂತೆ ಹಲವು ಯೋಜನೆಗಳನ್ನು ಡಾ. ಅಝ್ಹರಿ ಉದ್ಘಾಟಿಸಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಮತ್ತು ಧಾರ್ಮಿಕ ಪಾಠಗಳನ್ನು ಒದಗಿಸುವ ಉದ್ದೇಶದಿಂದ ಬಂಡಿವಾಡದಲ್ಲಿ ನಿರ್ಮಿಸಲಾದ ಪ್ರೈಮರಿ ಎಜುಕೇಶನ್ ಅಂಡ್ ಕಮ್ಯುನಿಟಿ ಡೆವಲಪ್‌ಮೆಂಟ್ ಸೆಂಟರ್ಗೂ ಚಾಲನೆ ನೀಡಿದರು.

ಅದರ ಜೊತೆಗೆ ನಾಲ್ಕು ಏಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಇಂಟಿಗ್ರೇಟೆಡ್ ಇನ್‌ಸ್ಟಿಟ್ಯೂಷನಲ್ ಪ್ರಾಜೆಕ್ಟ್‌ಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಮಗ್ರ ಕೇಂದ್ರದಲ್ಲಿ ಶಾಲಾ ಶಿಕ್ಷಣ, ವಸತಿ ವ್ಯವಸ್ಥೆ, ನಾಯಕತ್ವ ತರಬೇತಿ, ಹಾಗೂ ವಿದ್ಯಾರ್ಥಿ ಕಲ್ಯಾಣ ಯೋಜನೆಗಳು ಒಳಗೊಂಡಿವೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾನೂನು ಸಚಿವ ಎಚ್. ಕೆ. ಪಾಟೀಲ್, ಶಾಸಕ ಕೋಣರೆಡ್ಡಿ, ಸ್ಥಳೀಯ ನಾಯಕರೂ ಶಿಕ್ಷಣ ಕ್ಷೇತ್ರದ ಗಣ್ಯರೂ ಪಾಲ್ಗೊಂಡರು. ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ನೂರಾರು ಜನರು ಭಾಗವಹಿಸಿದರು.

“ಶಿಕ್ಷಣ, ಮೌಲ್ಯಗಳು ಮತ್ತು ಸೇವಾ ಮನೋಭಾವದ ಸಮನ್ವಯದ ಮೂಲಕವೇ ಸಮಾಜದ ಭವಿಷ್ಯವನ್ನು ಕಟ್ಟಬೇಕಾಗಿದೆ.” ಎಂದು ಡಾ. ಅಝ್ಹರಿ ಉಸ್ತಾದರು ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0