ಹಿಂದೂ ಧಾರ್ಮಿಕ ಟ್ರಸ್ಟ್‌ ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಸಿದ್ಧರಿದ್ದೀರಾ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Apr 16, 2025 - 17:26
ಹಿಂದೂ ಧಾರ್ಮಿಕ ಟ್ರಸ್ಟ್‌ ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಸಿದ್ಧರಿದ್ದೀರಾ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದ ಸುಪ್ರೀಂ ಕೋರ್ಟ್, ಹಿಂದೂ ಧಾರ್ಮಿಕ ಟ್ರಸ್ಟ್‌ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಇಚ್ಛಿಸುತ್ತಿದ್ದೀರಾ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಅರ್ಜಿಗಳ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಎರಡು ಆಯಾಮದ ಪ್ರಶ್ನೆಗಳನ್ನು ಉಭಯ ಪಕ್ಷಗಳ ಮುಂದಿಟ್ಟಿತು.

ನಾವು ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬೇಕೇ ಅಥವಾ ಹೈಕೋರ್ಟ್‌ಗೆ ವರ್ಗಾಯಿಸಬೇಕೇ? ಎರಡನೆಯದಾಗಿ, ನೀವು ನಿಜವಾಗಿಯೂ ಏನು ಆಗಬೇಕೆಂದು ಬಯಸುತ್ತಿದ್ದೀರಿ ಮತ್ತು ಏನೆಂದು ವಾದಿಸಲು ಯತ್ನಿಸುತ್ತಿದ್ದೀರಿ ಎಂಬುದನ್ನು ಸಂಕ್ಷಿಪ್ತವಾಗಿ ಸೂಚಿಸಿ? ಎಂದು ಸಿಜೆಐ ಕೇಳಿದರು.

ಎರಡನೇ ಅಂಶವು ನಮಗೆ ಮೊದಲ ಅಂಶದ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ಹಂತದವರೆಗೆ ಅನುಕೂಲಕರವಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರ ವಾದಿಸಿದ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್, “ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕಕ್ಕೆ ಅವಕಾಶ ನೀಡಿರುವುದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆ” ಎಂದು ವಾದಿಸಿದರು.

ವಕ್ಫ್ ಕಾಯ್ದೆಯ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡದೆ ನಾಳೆಗೆ (ಗುರುವಾರ) ವಿಚಾರಣೆ ಮುಂದೂಡಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0