ICC Women's World Cup Final:ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಭಾರತ

Nov 3, 2025 - 10:16
ICC Women's World Cup Final:ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಭಾರತ

ಮುಂಬೈ: ಭರವಸೆಯ ಆಟಗಾರ್ತಿಯರಾದ ದೀಪ್ತಿ ಶರ್ಮಾ ಹಾಗೂ ಶೆಫಾಲಿ ವರ್ಮಾ ಅವರ ಆಲ್‌ರೌಂಡರ್ ಆಟದ ಫಲವಾಗಿ ಭಾರತ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಇತಿಹಾಸ ನಿರ್ಮಿಸಿದೆ. ಈ ಮೂಲಕ 25 ವರ್ಷಗಳ ಬಳಿಕ ಮಹಿಳಾ ಏಕದಿನ ವಿಶ್ವಕಪ್‌ಗೆ ನೂತನ ಅಧಿಪತಿ ಸಿಕ್ಕಿದೆ.

299 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಆರಂಭವನ್ನು ಕಂಡಿತು. ತಂಜಿಮ್ ಬ್ರಿಟ್ಸ್‌ ಹಾಗೂ ಲಾರಾ ವೋಲ್ವಾರ್ಡ್ ಜೋಡಿ ಮೊದಲ ವಿಕೆಟ್‌ಗೆ 51 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಅನ್ನೆಕೆ ಬಾಷ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಮೂರನೇ ವಿಕೆಟ್‌ಗೆ ಸುನೆ ಲೂಸ್ ಹಾಗೂ ಲಾರಾ ವೋಲ್ವಾರ್ಡ್ ಜೋಡಿ 52 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸುನೆ ಲೂಸ್ 4 ಬೌಂಡರಿ ನೆರವಿನಿಂದ 25 ರನ್‌ ಬಾರಿಸಿ ಮಿಂಚಿದರು.

ಮಧ್ಯಮ ಕ್ರಮಾಂಕದಲ್ಲಿಯ ಆಟಗಾರ್ತಿಯರು ಲಾರಾ ವೋಲ್ವಾರ್ಡ್ ಅವರಿಗೆ ಯಾವೊಬ್ಬ ಆಟಗಾರ್ತಿ ಉತ್ತಮ ಸಾಥ್ ನೀಡಲಿಲ್ಲ. ಆದರೆ 6ನೇ ವಿಕೆಟ್‌ಗೆ ನಾಯಕಿ ಜೊತೆಗೂಡಿದ ಅನ್ನೆರಿ ಡೆರ್ಕ್ಸೆನ್ (35) ತಂಡಕ್ಕೆ ಅರ್ಧಶತಕದ ಜೊತೆಯಾಟದ ಕಾಣಿಕಡ ನೀಡಿದರು. ಆದರೆ ಆ ಬಳಿಕ ಬಂದ ಯಾವೊಬ್ಬ ಆಟಗಾರ್ತಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ.

ದಕ್ಷಿಣ ಆಫ್ರಿಕಾ ತಂಡದ ಲಾರಾ ವೋಲ್ವಾರ್ಡ್ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರು. ಇವರು ಬ್ಯಾಕ್ ಟು ಬ್ಯಾಕ್‌ ನಾಕೌಟ್‌ ಪಂದ್ಯಗಳಲ್ಲಿ ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಫೈನಲ್‌ ಪಂದ್ಯದಲ್ಲಿ 103.06ರ ಸ್ಟ್ರೈಕ್‌ ರೇಟ್‌ನಲ್ಲಿ 101 ರನ್ ಬಾರಿಸಿದರು. ಈ ವೇಳೆ 11 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಮಿಂಚಿದ್ದಾರೆ. ಆದರೂ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲಿಲ್ಲ.

ಭರ್ಜರಿ ಆರಂಭ

ಭಾರತದ ತಂಡ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಆರಂಭಿಕರು ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಆರಂಭಿಕರಾದ ಸ್ಮೃತಿ ಮಂಧಾನ (45), ಶೆಫಾಲಿ ವರ್ಮಾ ಜೋಡಿ 104 ರನ್‌ ಸೇರಿಸಿತು. ಜೆಮಿಮಾ ರೋಡ್ರಿಗಸ್‌ (24), ಹರ್ಮನ್ ಪ್ರೀತ್ ಕೌರ್ (20) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ವಿಫಲರಾದರು. ಶೆಫಾಲಿ ವರ್ಮಾ 7 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 87 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 58 ರನ್‌ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ 34 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಂತಿಮಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 298 ರನ್‌ ಕಲೆ ಹಾಕಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0