ಮತ್ತೊಂದು ಏರ್​​ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ಕೋಲ್ಕತ್ತಾದಲ್ಲಿ ತುರ್ತು ಲ್ಯಾಂಡಿಂಗ್

Jun 17, 2025 - 11:00
ಮತ್ತೊಂದು ಏರ್​​ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ಕೋಲ್ಕತ್ತಾದಲ್ಲಿ ತುರ್ತು ಲ್ಯಾಂಡಿಂಗ್

ಕೋಲ್ಕತ್ತಾ: ಸ್ಯಾನ್​ಫ್ರಾನ್ಸಿಸ್ಕೋದಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪ್ರಯಾಣಿಕರನ್ನು ಕೋಲ್ಕತ್ತಾದಲ್ಲಿ ಇಳಿಸಲಾಯಿತು.

ವಿಮಾನದ ಒಂದು ಎಂಜಿನ್‌ನಲ್ಲಿ ಸಮಸ್ಯೆ ಉಂಟಾದ ಕಾರಣ, ಈ ವಿಮಾನ ಕೋಲ್ಕತ್ತಾದಿಂದ ಮುಂಬೈಗೆ ಹಾರಲು ಸಾಧ್ಯವಾಗಲಿಲ್ಲ. ಏರ್ ಇಂಡಿಯಾ ಕೋಲ್ಕತ್ತಾದಿಂದ ಮುಂಬೈಗೆ ಮತ್ತೊಂದು ವಿಮಾನವನ್ನು ವ್ಯವಸ್ಥೆ ಮಾಡುತ್ತಿದೆ.

ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನದ ಕ್ಯಾಪ್ಟನ್ ಪ್ರಯಾಣಿಕರಿಗೆ ತಿಳಿಸಿದರು. ಸೋಮವಾರ ಮುಂಜಾನೆ, ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ AI2493 ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಏತನ್ಮಧ್ಯೆ, ದೆಹಲಿಯಿಂದ ರಾಂಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಸೋಮವಾರ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷದಿಂದಾಗಿ ರಾಜಧಾನಿಗೆ ಹಿಂತಿರುಗಬೇಕಾಯಿತು. ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಮೂಲತಃ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಸಂಜೆ 6.20 ಕ್ಕೆ ಇಳಿಯಬೇಕಿತ್ತು.

ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷವನ್ನು ಪೈಲಟ್ ಕಂಡುಹಿಡಿದ ಬಳಿಕ ಮಧ್ಯರಾತ್ರಿ ಹಾಂಗ್ ಕಾಂಗ್‌ಗೆ ಹಿಂತಿರುಗಬೇಕಾಯಿತು. ಬೋಯಿಂಗ್ 787-8 ಡ್ರೀಮ್‌ಲೈನರ್ ನಿರ್ವಹಿಸುವ AI315 ವಿಮಾನವು ಹಾಂಗ್ ಕಾಂಗ್‌ನಿಂದ ಹೊರಟು ಮಧ್ಯಾಹ್ನ 12.20 ಕ್ಕೆ ದೆಹಲಿಯಲ್ಲಿ ಇಳಿಯುವ ನಿರೀಕ್ಷೆಯಿತ್ತು ಎಂದು ಫ್ಲೈಟ್ ಟ್ರ್ಯಾಕಿಂಗ್ ಸೈಟ್ ಫ್ಲೈಟ್‌ರಾಡರ್ 24 ತಿಳಿಸಿದೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದು, ವಿಮಾನವನ್ನು ಸುರಕ್ಷತಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗಷ್ಟೇ ಅಹಮದಾಬಾದ್​ನಿಂದ ಲಂಡನ್​​ಗೆ ಹೊರಟಿದ್ದ ವಿಮಾನ ಅಪಘಾತಕ್ಕೀಡಾಗಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0